ಅದಾನಿ ಬಂದರು ಯೋಜನೆ ವಿರೋಧಿ ಪ್ರತಿಭಟನೆ; ಪೊಲೀಸ್ ಠಾಣೆ ಮೇಲೆ ದಾಳಿ: 3000 ಕ್ಕೂ ಅಧಿಕ ಮಂದಿ ಮೇಲೆ ಎಫ್‌ಐಆರ್

Update: 2022-11-28 13:29 GMT

ತಿರುವನಂತಪುರಂ: ವಿಝಿಂಜಂ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ 3000 ಕ್ಕೂ ಅಧಿಕ ಪ್ರತಿಭಟನಾಕಾರರ ಮೇಲೆ ಕಾನೂನುಬಾಹಿರ ಸಭೆ, ಗಲಭೆ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಾಗಿದೆ. ಅದಾನಿ ಬಂದರಿನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆದಿದೆ ಎಂದು ವರದಿಯಾಗಿದೆ.

ನಿರ್ಮಾಣ ಹಂತದಲ್ಲಿರುವ ಅದಾನಿ ಬಂದರಿನ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ನಿನ್ನೆ ರಾತ್ರಿ ಕೇರಳ ರಾಜಧಾನಿ ತಿರುವನಂತಪುರದಿಂದ 20 ಕಿಮೀ ದೂರದಲ್ಲಿರುವ ಪೊಲೀಸ್‌ ಠಾಣೆಯ ಮೇಲೆ ಹಿಂಸಾತ್ಮಕ ಗುಂಪು ದಾಳಿ ಮಾಡಿದೆ. ಠಾಣೆಯನ್ನು ಧ್ವಂಸಗೊಳಿಸಿ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ್ದಕ್ಕಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 3,000 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಬಂದರು ಯೋಜನೆಯ ಸ್ಥಳಕ್ಕೆ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಟ್ರಕ್‌ಗಳನ್ನು ಪ್ರತಿಭಟನಾಕಾರರು ಶನಿವಾರ ತಡೆದಿದ್ದರು. ಕಳೆದ ವಾರ ನ್ಯಾಯಾಲಯದ ನಿರ್ದೇಶನದ ನಂತರ ಯೋಜನೆಯನ್ನು ನಿರ್ಮಿಸಲು ಅನುಮತಿ ನೀಡಲಾಗಿತ್ತು.

ಬಂದರಿನ ಯೋಜನೆಯು ಕರಾವಳಿಯ ಮಣ್ಣು ಸವೆತಕ್ಕೆ ಕಾರಣವಾಗುತ್ತಿದೆ ಹಾಗೂ ಕರಾವಳಿ ಮೀನುಗಾರರಾದ ತಮ್ಮ ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆ  ಎಂದು ಆರೋಪಿಸಿ ಕಳೆದ ಮೂರು ತಿಂಗಳಿನಿಂದ, ಬಹುತೇಕ ಕ್ಯಾಥೋಲಿಕ್ ಪಾದ್ರಿಗಳ ನೇತೃತ್ವದಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

ತಿರುವನಂಡಂನ ಲ್ಯಾಟಿನ್ ಆರ್ಚ್‌ಬಿಷಪ್ ಸೇರಿದಂತೆ ಮೀನುಗಾರರು ಮತ್ತು ಪಾದ್ರಿಗಳ ವಿರುದ್ಧ ಕೊಲೆ ಯತ್ನ, ಗಲಭೆ, ಅತಿಕ್ರಮಣ, ಕ್ರಿಮಿನಲ್ ಪಿತೂರಿ ಆರೋಪ ಹೊರಿಸಲಾಗಿದೆ.  ಎಫ್‌ಐಆರ್‌ಗಳಲ್ಲಿ ದಾಖಲಾಗಿರುವ 100 ಕ್ಕೂ ಹೆಚ್ಚು ಜನರಲ್ಲಿ ಕನಿಷ್ಠ 15  ಮಂದಿ ಲ್ಯಾಟಿನ್ ಕ್ಯಾಥೋಲಿಕ್ ಪಾದ್ರಿಗಳು ಎಂದು ವರದಿಯಾಗಿದೆ.

ಯೋಜನಾ ಸ್ಥಳಕ್ಕೆ ಕಲ್ಲುಗಳನ್ನು ಸಾಗಿಸುತ್ತಿದ್ದ 25 ಟ್ರಕ್‌ಗಳನ್ನು ಕಷ್ಟಪಟ್ಟು ಸಾಗಿಸಬೇಕಾಯಿತು, ಇನ್ನೂ 25 ಟ್ರಕ್‌ಗಳನ್ನು ಬಂದರು ಆವರಣದಿಂದ ಹೊರಹೋಗಲು ಪ್ರತಿಭಟನಾಕಾರರು ಅನುಮತಿಸಿಲ್ಲ ಎಂದು ವರದಿಗಳು ತಿಳಿಸಿವೆ.

ಇದರ ನಂತರ ಬಂದರು ಯೋಜನೆಯ ಬೆಂಬಲಿಗರು ಎಂದು ಹೇಳುವ ಗುಂಪಿನಿಂದ ಪ್ರತಿ-ಪ್ರತಿಭಟನೆ ನಡೆದಿದ್ದು,   ಕಲ್ಲು ತೂರಾಟ ಸೇರಿದಂತೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು. ಇದರಲ್ಲಿ ಅನೇಕ ಪೊಲೀಸರು ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಬಂದರು ಯೋಜನೆಯನ್ನು ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಹಿಂಸಾಚಾರದಲ್ಲಿ 40 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಹಲವಾರು ಸ್ಥಳೀಯರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಿಂದ ಸುಮಾರು ₹ 85 ಲಕ್ಷ ನಷ್ಟವಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

Similar News