ಸಗಟು ಮಾರಾಟ ಘಟಕವನ್ನು ಮುಚ್ಚಲಿರುವ ಅಮೆಝಾನ್: ಇದು ಭಾರತದಲ್ಲಿ ಅದರ 3ನೇ ಉದ್ಯಮ ಮುಚ್ಚುಗಡೆ
ಹೊಸದಿಲ್ಲಿ: ಜನಪ್ರಿಯ ಇ-ಕಾಮರ್ಸ್(E-commerce) ತಾಣ ಅಮೆಝಾನ್(Amazon) ಭಾರತದಲ್ಲಿಯ ಸಣ್ಣಪುಟ್ಟ ಅಂಗಡಿಗಳ ಅಗತ್ಯಗಳನ್ನು ಪೂರೈಸುತ್ತಿದ್ದ ತನ್ನ ಸಗಟು ಇ-ಕಾಮರ್ಸ್ ವೆಬ್‌ಸೈಟ್ ಅಮೆಝಾನ್ ಡಿಸ್ಟ್ರಿಬ್ಯೂಷನ್ ಅನ್ನು ಸ್ಥಗಿತಗೊಳಿಸುತ್ತಿದೆ. ಈ ಫ್ಲ್ಯಾಟ್‌ಫಾರ್ಮ್ ಬೆಂಗಳೂರು,ಮೈಸೂರು ಮತ್ತು ಹುಬ್ಬಳ್ಳಿಗಳ ಸುತ್ತುಮುತ್ತಲೂ ಸಕ್ರಿಯವಾಗಿತ್ತು.
ನೆರೆಹೊರೆಯ ಸಣ್ಣಪುಟ್ಟ ಅಂಗಡಿಗಳಿಗಾಗಿಯೇ ಮೀಸಲಿಟ್ಟಿದ್ದ ಪೋರ್ಟಲ್ ಮೂಲಕ ಅಮೆಝಾನ್ ಡಿಸ್ಟ್ರಿಬ್ಯೂಷನ್ ಅವುಗಳ ಖರೀದಿ ಅಗತ್ಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಿತ್ತು.
ಹಾಲಿ ಗ್ರಾಹಕರು ಮತ್ತು ಪಾಲುದಾರರ ಹಿತವನ್ನು ಗಮನದಲ್ಲಿಟ್ಟುಕೊಂಡು ಹಂತಹಂತವಾಗಿ ಅಮೆಝಾನ್ ಡಿಸ್ಟ್ರಿಬ್ಯೂಷನ್ ಅನ್ನು ಸ್ಥಗಿತಗೊಳಿಸಲು ಅಮೆಝಾನ್ ನಿರ್ಧರಿಸಿದೆ. ವಾರ್ಷಿಕ ಕಾರ್ಯಾಚರಣೆ ಪರಿಶೀಲನೆ ಪ್ರಕ್ರಿಯೆಯ ಭಾಗವಾಗಿ ಅಮೆಝಾನ್ ಡಿಸ್ಟ್ರಿಬ್ಯೂಷನ್‌ನ್ನು ನಿಲ್ಲಿಸಲಾಗುವುದು ಎಂದು ಅಮೆಝಾನ್ ವಕ್ತಾರರು ಸುದ್ದಿಸಂಸ್ಥೆಗೆ ತಿಳಿಸಿದರು.
‘ನಾವು ಭಾರತಕ್ಕೆ ಬದ್ಧರಾಗಿದ್ದೇವೆ ಮತ್ತು ದಿನಸಿ,ಸ್ಮಾರ್ಟ್‌ಫೋನ್‌ಗಳು ಮತ್ತು ಕನ್ಸ್ಯೂಮರ್ ಇಲೆಕ್ಟ್ರಾನಿಕ್ಸ್,ಫ್ಯಾಷನ್ ಮತ್ತು ಬ್ಯೂಟಿ ಹಾಗೂ ಅಮೆಝಾನ್ ಬಿಸಿನೆಸ್‌ನಂತಹ ನಮ್ಮ ಬಿ2ಬಿ ಕೊಡುಗೆಗಳು ಸೇರಿದಂತೆ ನಮ್ಮ ಗ್ರಾಹಕರಿಗೆ ಲಾಭದಾಯಕ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಮುಂದುವರಿಸುತ್ತೇವೆ ’ಎಂದು ಕಂಪನಿಯು ತಿಳಿಸಿದೆ.
ಇದರೊಂದಿಗೆ ಕಳೆದೊಂದು ವಾರದಿಂದ ಅಮೆಝಾನ್ ಭಾರತದಲ್ಲಿಯ ತನ್ನ ಮೂರು ಉದ್ಯಮಗಳಿಗೆ ಮಂಗಳ ಹಾಡಿದಂತಾಗಿದೆ.
ತಾನು ಭಾರತದಲ್ಲಿ ಪ್ರಾಯೋಗಿಕವಾಗಿ ನಡೆಸುತ್ತಿದ್ದ ಫುಡ್ ಡೆಲಿವರಿ ಉದ್ಯಮವನ್ನು ನಿಲ್ಲಿಸುವುದಾಗಿ ಅಮೆಝಾನ್ ಶುಕ್ರವಾರ ಪ್ರಕಟಿಸಿತ್ತು. ಅದಕ್ಕೂ ಮುನ್ನ ಕಂಪನಿಯು ಅಮೆಝಾನ್ ಅಕಾಡೆಮಿ ಪ್ಲ್ಯಾಟ್‌ಫಾರ್ಮ್‌ನ್ನು ಮುಚ್ಚುವುದಾಗಿ ಮಾಹಿತಿಯನ್ನು ಹಂಚಿಕೊಂಡಿತ್ತು. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ವರ್ಚುವಲ್ ಕಲಿಕೆ ಉಚ್ಛ್ರಾಯದಲ್ಲಿದ್ದಾಗ ಅಮೆಝಾನ್ ಅಕಾಡೆಮಿಯನ್ನು ಪ್ರಾರಂಭಿಸಲಾಗಿತ್ತು.