​ಎನ್‌ಎಂಪಿಟಿಗೆ ಆಗಮಿಸಿದ ವಿಲಾಸಿ ಪ್ರಯಾಣಿಕ ಹಡಗು !

ಕೋವಿಡ್ ಬಳಿಕ ಪ್ರಥಮ ಪ್ರಯಾಣಿಕ ಹಡಗಿಗೆ ಸಂಭ್ರಮದ ಸ್ವಾಗತ

Update: 2022-11-28 13:24 GMT

ಮಂಗಳೂರು, ನ. 28: ನವ ಮಂಗಳೂರು ಬಂದರಿನ ತೀರದಲ್ಲಿ ಇಂದು ಯೂರೋಪ್‌ನ ಮಾಲ್ಟಾದಿಂದ ಆಗಮಿಸಿದ ವಿಲಾಸಿ ಪ್ರಯಾಣಿಕ ಹಡಗನ್ನು ಸ್ವಾಗತಿಸಲಾಯಿತು.

271 ಪ್ರಯಾಣಿಕರು ಹಾಗೂ 373 ಮಂದಿ ಹಡಗಿನ ಸಿಬ್ಬಂದಿಯೊಂದಿಗೆ ಆಗಮಿಸಿದ ಎಂಎಸ್ ಯುರೋಪ 2ಐ ಇಂದು ಬೆಳಗ್ಗೆ 6.30ಕ್ಕೆ ನವ ಮಂಗಳೂರು ಬಂದರಿಗೆ ಆಗಮಿಸಿದೆ. 224.38 ಮೀಟರ್ ಉದ್ದ ಹಾಗೂ 29.99 ಮೀಟರ್ ಅಗಲದ ಈ ಪ್ರಯಾಣಿಕ ಹಡಗು ಗೋವಾದಿಂದ ಮಂಗಳೂರಿಗೆ ಆಗಮಿಸಿದ್ದು, ಇಲ್ಲಿಂದ ಕೊಚ್ಚಿನ್ ಬಂದರಿಗೆ ತೆರಳಿದೆ. ಕೋವಿಡ್ ಬಳಿಕ ಅಂದರೆ ಸುಮಾರು ಎರಡು ವರ್ಷಗಳ ಬಳಿಕ ಪ್ರಯಾಣಿಕ ಹಡಗು ಎನ್‌ಎಂಪಿಟಿ ಬಂದರಿಗೆ ಆಗಮಿಸಿದೆ.

ಎನ್‌ಎಂಪಿಎಯ ಬಂದರು ಅಧಿಕಾರಿಗಳು ಪ್ರಯಾಣಿಕರ ಸೌಲಭ್ಯಕ್ಕೆ ಸಕಲ ಸಿದ್ಧತೆಗಳನ್ನು ಕಲ್ಪಿಸಿದ್ದು, ಹಡಗಿನಿಂದ ಇಳಿದು ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡುವ ಪ್ರಯಾಣಿಕರಿಗಾಗಿ ಬಸ್ಸು, ಕಾರುಗಳು, ಪ್ರೀಪೇಯ್ಡ್ ಟಾಕ್ಸಿಗಳ ವ್ಯವಸ್ಥೆಯನ್ನು ಕಲ್ಪಿಸಲಾಯಿತು.

ಪ್ರಯಾಣಿಕರು ಸಂತ ಅಲೋಶಿಯಸ್ ಕಾಲೇಜು, ಕುದ್ರೋಳಿ ದೇವಸ್ಥಾನ, ಮಾರುಕಟ್ಟೆ, ಗೇರುಬೀಜ ಕಾರ್ಖಾನೆ, ಉಡುಪಿ ದೇವಸ್ಥಾನ, ಗೋಮಟೇಶ್ವರ, ಸಾವಿರ ಕಂಬದ ಬಸದಿ, ಫಿಝಾ ಮಾಲ್ ಮೊದಲಾದ ಪ್ರದೇಶಗಳಿಗೆ ಭೇಟಿ ನೀಡಿದರು. ಬಳಿಕ ಸಂಜೆ 3 ಗಂಟೆಯ ವೇಳೆಗೆ ಹಡಗು ಕೊಚಿನ್ ಬಂದರಿನತ್ತ ಎನ್‌ಎಂಪಿಟಿಯಿಂದ ನಿರ್ಗಮಿಸಿದೆ.

Similar News