ಶ್ರದ್ಧಾ ದೇಹವನ್ನು ತುಂಡರಿಸಲು ಅಫ್ತಾಬ್ ಬಳಸಿದ್ದ ಆಯುಧ ಪತ್ತೆ

Update: 2022-11-28 14:04 GMT

ಹೊಸದಿಲ್ಲಿ,ನ.28: ತನ್ನ  ಸ್ನೇಹಿತೆ ಶ್ರದ್ಧಾ ವಾಲ್ಕರ್(Shraddha Walker) ಳ  ಶರೀರವನ್ನು ತುಂಡರಿಸಲು ಅಫ್ತಾಬ್ ಪೂನಾವಾಲಾ(Aftab Poonawala) ಬಳಸಿದ್ದ ಆಯುಧಗಳಲ್ಲೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರು ಕಳೆದ ವಾರ 5ರಿಂದ 6 ಇಂಚು ಉದ್ದದ ಐದು ಚೂರಿಗಳನ್ನೂ ವಶಪಡಿಸಿಕೊಂಡಿದ್ದರು. ಅಪರಾಧದಲ್ಲಿ ಈ ಚೂರಿಗಳು ಬಳಕೆಯಾಗಿದ್ದವೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ದಕ್ಷಿಣ ದಿಲ್ಲಿಯ ಮೆಹ್ರೌಲಿ(Mehrauli)ಯ ತನ್ನ ಫ್ಲ್ಯಾಟ್ ನಲ್ಲಿ ಶ್ರದ್ಧಾಳನ್ನು ಉಸಿರುಗಟ್ಟಿಸಿ ಕೊಂದಿದ್ದ ಅಫ್ತಾಬ್ ಆಕೆಯ ಶವವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಅವುಗಳನ್ನು ಫ್ರಿಡ್ಜ್ನಲ್ಲಿರಿಸಿದ್ದ. ಮುಂದಿನ 18 ದಿನಗಳ ಕಾಲ ಅವುಗಳನ್ನು ನಗರದ ವಿವಿಧೆಡೆಗಳಲ್ಲಿ ಎಸೆದಿದ್ದ.

ಶ್ರದ್ಧಾಳ ತಲೆಬುರುಡೆ ಮತ್ತು ಶರೀರದ ಇತರ ಕೆಲವು ಭಾಗಗಳನ್ನು ಪೊಲೀಸರು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ.

ಕೊಲೆಯ ಬಳಿಕ ಶ್ರದ್ಧಾಳ ಶರೀರದ ತುಂಡುಗಳು ಇನ್ನೂ ಫ್ರಿಡ್ಜ್ ನಲ್ಲಿ ಇದ್ದಾಗಲೇ ಅಫ್ತಾಬ್ವೈ ದ್ಯೆಯೋರ್ವಳೊಂದಿಗೆ ಡೇಟಿಂಗ್ ಆರಂಭಿಸಿದ್ದ. ಮೊಬೈಲ್ ಡೇಟಿಂಗ್ ಆ್ಯಪ್ ‘ಬಂಬಲ್ ’(Bumble)ಮೂಲಕ ಪರಿಚಯವಾಗಿದ್ದ ವೈದ್ಯೆಗೆ ಶ್ರದ್ಧಾಳ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದ ಎಂದು ದಿಲ್ಲಿ ಪೊಲೀಸ್ ಮೂಲಗಳು ಸೋಮವಾರ ತಿಳಿಸಿದವು.

ಅಫ್ತಾಬ್ (27)ನನ್ನು ಮೊದಲ ಬಾರಿಯ ಅಪರಾಧಿಗಳಿಗಾಗಿ ಮೀಸಲಾಗಿರುವ ತಿಹಾರ್ ಜೈಲು (Tihar Jail)ಸಂಖ್ಯೆ 4ರಲ್ಲಿ ಇರಿಸಲಾಗಿದೆ. ಕೋಣೆಯಲ್ಲಿ ಆತ ಒಂಟಿಯಾಗಿಲ್ಲ,ಆದರೂ ಆತನ ಸುರಕ್ಷತೆಗಾಗಿ ಎಲ್ಲ ಮುನ್ನೆಚ್ಚರಿಕೆಗಳನ್ನು ವಹಿಸಲಾಗಿದೆ ಎಂದು ಜೈಲು ಅಧಿಕಾರಿಯೋರ್ವರು ತಿಳಿಸಿದರು.

Similar News