ಮಣಿಪಾಲ: ಕೆಎಂಸಿಯಿಂದ ಅಂಗಾಂಗ ದಾನ ಜಾಗೃತಿಗೆ ವಾಕಥಾನ್

Update: 2022-11-28 15:41 GMT

ಉಡುಪಿ, ನ.28: ಭಾರತದಲ್ಲಿ ರಾಷ್ಟ್ರೀಯ ಅಂಗಾಂಗ ದಾನ ದಿನಾಚರಣೆಯ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಮೋಹನ್ ಫೌಂಡೇಶನ್ ಸಹಯೋಗದೊಂದಿಗೆ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಸೋಮವಾರ ಮಣಿಪಾಲದಲ್ಲಿ ವಾಕಥಾನ್‌ನ್ನು ಆಯೋಜಿಸಿತ್ತು. 

ಮಣಿಪಾಲ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮತ್ತು ಕುಲಪತಿ ಲೆ.ಜ.(ಡಾ)ಎಂ.ಡಿ.ವೆಂಕಟೇಶ್ ಜಂಟಿಯಾಗಿ ವಾಕಥಾನ್‌ಗೆ ಹಸಿರು ನಿಶಾನೆ ತೋರಿಸಿದರು. ಮಾಹೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ, ಕೆಎಂಸಿ ಡೀನ್ ಡಾ ಶರತ್ ಕುಮಾರ್ ರಾವ್, ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್,  ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ಡಾ ಎಚ್.ಎಸ್.ಬಲ್ಲಾಳ್ ಅಂಗಾಂಗ ದಾನದ ಮಹತ್ವವನ್ನು ಒತ್ತಿ ಹೇಳಿದರೆ, ಡಾ.ಎಂ.ಡಿ. ವೆಂಕಟೇಶ್ ಮಾತಾನಾಡಿ  ಲಕ್ಷಾಂತರ ಮಂದಿ ಅಂಗಾಂಗಕ್ಕಾಗಿ ಕಾಯುತ್ತಿದ್ದಾರೆ. ಆದರೆ ಅರಿವಿನ ಕೊರತೆ ಯಿಂದ ಇವುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು. 

ಡಾ.ಅವಿನಾಶ್ ಶೆಟ್ಟಿ ಸ್ವಾಗತಿಸಿದರೆ, ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥರಾದ  ಡಾ ಅರುಣ್ ಚಾವ್ಲಾ ಅವಲೋಕನ ನೀಡಿದರು. ಮಾಹೆ ಮಣಿಪಾಲದ ಎದುರಿನಿಂದ ಆರಂಭಗೊಂಡ ವಾಕಥಾನ್ ಟೈಗರ್ ವೃತ್ತ, ಎಂಐಟಿ ವೃತ್ತದ ಮೂಲಕ ಮತ್ತೆ ಟೈಗರ್ ವೃತ್ತ, ಸಿಂಡಿಕೇಟ್ ವೃತ್ತದ ಮೂಲಕ ಸಾಗಿ  ಮಾಹೆ ಮಣಿಪಾಲದಲ್ಲಿ  ಕೊನೆಗೊಂಡಿತು. ಕಾಯಕ್ರಮದಲ್ಲಿ ವೈದ್ಯರು, ವಿದ್ಯಾರ್ಥಿಗಳು, ಮೋಹನ್ ಫೌಂಡೇಶನ್ ಸಿಬ್ಬಂದಿಗಳು ಮತ್ತು ಆಸ್ಪತ್ರೆ  ಸಿಬ್ಬಂದಿಗಳು  ಸೇರಿದಂತೆ ೧೦೦೦ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

Similar News