ಹೈಕೋರ್ಟ್ ‘ನಗರ ಯೋಜನಾ ಸಂಸ್ಥೆ’ಯಾಗಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

Update: 2022-11-28 15:50 GMT

ಹೊಸದಿಲ್ಲಿ, ನ. 28: ಆಂಧ್ರಪ್ರದೇಶ ಹೈಕೋರ್ಟ್ ‘ನಗರ ಯೋಜನಾ ಸಂಸ್ಥೆ’ ('Urban Planning Agency')ಅಥವಾ ‘ಇಂಜಿನಿಯರ್’ ("Engineer")ಆಗಲು ಸಾಧ್ಯವಿಲ್ಲ ಹಾಗೂ ನೂತನ ರಾಜಧಾನಿಯು ಆರು ತಿಂಗಳಲ್ಲಿ ಸಿದ್ಧವಾಗಬೇಕು ಎಂದು ಸರಕಾರಕ್ಕೆ ಸೂಚನೆ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court)ಸೋಮವಾರ ಹೇಳಿದೆ.

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಆಂಧ್ರಪ್ರದೇಶ ಸರಕಾರ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್, ಅರ್ಜಿಗೆ ರೈತರು, ರೈತ ಸಂಘಟನೆಗಳು ಮತ್ತು ಕೇಂದ್ರ ಸರಕಾರದಿಂದ ಪ್ರತಿಕ್ರಿಯೆಗಳನ್ನು ಕೋರಿದೆ. ರಾಜಧಾನಿಯನ್ನು ವರ್ಗಾಯಿಸುವುದು, ಇಬ್ಭಾಗಿಸುವುದು ಅಥವಾ ಮೂರು ಭಾಗ ಮಾಡುವುದಕ್ಕೆ ಸಂಬಂಧಿಸಿದ ಯಾವುದೇ ಕಾನೂನು ಮಾಡಲು ರಾಜ್ಯ ಶಾಸಕಾಂಗಕ್ಕೆ ‘ಯೋಗ್ಯತೆಯಿಲ್ಲ’ ('No Merit')ಎಂಬುದಾಗಿ ಆಂಧ್ರಪ್ರದೇಶ ಹೈಕೋರ್ಟ್ ಹೇಳಿದೆ. 

ರಾಜ್ಯ ಸರಕಾರವು ಅಮರಾವತಿ ರಾಜಧಾನಿ ನಗರ ಮತ್ತು ರಾಜಧಾನಿ ವಲಯವನ್ನು ಆರು ತಿಂಗಳಲ್ಲಿ ನಿರ್ಮಿಸಿ ಅಭಿವೃದ್ಧಿಪಡಿಸಬೇಕು ಎನ್ನುವ ನಿರ್ದೇಶನ ಸೇರಿದಂತೆ ಹೈಕೋರ್ಟ್ ನ ಕಾಲ-ಮಿತಿಗೆ ಸಂಬಂಧಿಸಿದ ನಿರ್ದೇಶನಗಳಿಗೂ ನ್ಯಾಯಮೂರ್ತಿಗಳಾದ ಕೆ.ಎಮ್. ಜೋಸೆಫ್(K.M. Joseph) ಮತ್ತು ಬಿ.ವಿ. ನಾಗರತ್ನ(B.V. Nagaratna) ಅವರನ್ನೊಳಗೊಂಡ ನ್ಯಾಯಪೀಠವು ತಡೆ ನೀಡಿದೆ.

ಅಮರಾವತಿ ರಾಜಧಾನಿ ನಗರ ಮತ್ತು ವಲಯದಲ್ಲಿನ ರಸ್ತೆ ಮತ್ತು ಚರಂಡಿ ನಿರ್ಮಾಣ, ವಿದ್ಯುತ್ ಮತ್ತು ಕುಡಿಯುವ ನೀರಿನ ಪೂರೈಕೆ ಮುಂತಾದ ಮೂಲಸೌಕರ್ಯ ಅಭಿವೃದ್ಧಿಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸುವಂತೆಯೂ ಸರಕಾರ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಹೈಕೋರ್ಟ್ ಆದೇಶ ನೀಡಿತ್ತು.

ಈ ವಿಷಯವನ್ನು ವಿವರವಾಗಿ ಪರಿಶೀಲಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು, ರಾಜ್ಯ ಸರಕಾರ, ರೈತರು ಮತ್ತು ರೈತ ಸಂಘಟನೆಗಳು ಸಲ್ಲಿಸಿದ ಅರ್ಜಿಗಳ ಮುಂದಿನ ವಿಚಾರಣೆಯನ್ನು ಜನವರಿ 31ಕ್ಕೆ ನಿಗದಿಪಡಿಸಿದೆ. ರಾಜ್ಯ ಸರಕಾರ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯನ್ನು ಡಿಸೆಂಬರ್ ಕೊನೆಯ ವೇಳೆಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಈ ಅರ್ಜಿದಾರರಿಗೆ ಸೂಚಿಸಿತು.

ಅಭಿವೃದ್ಧಿ ಕರಾರು ಹಾಗೂ ವಾಪಸ್ ಪಡೆಯಲಾಗದ ಅಧಿಕಾರ ವರ್ಗಾವಣೆಯ ಶರತ್ತುಗಳಲ್ಲಿ ಒಪ್ಪಿಕೊಂಡಿರುವಂತೆ, ರಾಜಧಾನಿ ನಗರ ಮತ್ತು ರಾಜಧಾನಿ ವಲಯವನ್ನು ಅಭಿವೃದ್ಧಿಪಡಿಸುವಲ್ಲಿ ರಾಜ್ಯ ಸರಕಾರ ಮತ್ತು ಆಂಧ್ರಪ್ರದೇಶ ರಾಜಧಾನಿ ವಲಯ ಅಭಿವೃದ್ಧಿ ಪ್ರಾಧಿಕಾರ (ಎಪಿಸಿಆರ್ಡಿಎ) ವಿಫಲವಾಗಿದೆ ಹಾಗೂ ಇದು ರಾಜ್ಯ ಸರಕಾರ ನೀಡಿರುವ ಭರವಸೆಯ ಉಲ್ಲಂಘನೆಯಾಗಿದೆ ಎಂದು ಮಾರ್ಚ್ 3ರಂದು ಹೈಕೋರ್ಟ್ ಹೇಳಿತ್ತು.

ರೈತರು ತಮ್ಮ ಏಕೈಕ ಜೀವನಧಾರವಾಗಿದ್ದ 33,000 ಎಕರೆಗೂ ಅಧಿಕ ಫಲವತ್ತಾದ ಭೂಮಿಯನ್ನು ರಾಜಧಾನಿ ನಿರ್ಮಾಣಕ್ಕಾಗಿ ನೀಡಿದ್ದಾರೆ ಎಂದು ಹೇಳಿದ್ದ ಹೈಕೋರ್ಟ್, ರಾಜ್ಯ ಸರಕಾರ ಮತ್ತು ಎಪಿಸಿಆರ್ಡಿಎ ಅರ್ಜಿದಾರರ (ರೈತರ) ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಹೇಳಿತ್ತು.

Similar News