ಹರ್ಯಾಣ ಜಿಲ್ಲಾ ಪರಿಷತ್ ಚುನಾವಣೆ: ಬಿಜೆಪಿಗೆ ಭಾರೀ ಹಿನ್ನಡೆ

ನೆಲೆಯೂರಿದ ಆಮ್‌ ಆದ್ಮಿ ಪಕ್ಷ

Update: 2022-11-28 16:17 GMT

ಚಂಡೀಗಢ, ನ. 28: ಹರ್ಯಾಣ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಬಿಜೆಪಿ (BJP)ಹಿನ್ನಡೆ ಅನುಭವಿಸಿದೆ. ಅದು ತಾನು ಸ್ಪರ್ಧಿಸಿದ 100 ಸ್ಥಾನಗಳ ಪೈಕಿ ಕೇವಲ 22ರಲ್ಲಿ ವಿಜಯ ಗಳಿಸಿದೆ. 15 ಸ್ಥಾನಗಳನ್ನು ಗೆದ್ದಿರುವ ಆಮ್ ಆದ್ಮಿ (Aam Aadmi)ಪಕ್ಷ ವು ಎರಡನೇ ಸ್ಥಾನದಲ್ಲಿದೆ. ಅದು ಕೂಡ 100 ಸ್ಥಾನಗಳಲ್ಲಿ ಸ್ಪರ್ಧಿಸಿದೆ.

ರವಿವಾರ ಫಲಿತಾಂಶವನ್ನು ಘೋಷಿಸಲಾಗಿದ್ದು, ಇಂಡಿಯನ್ ನ್ಯಾಶನಲ ಲೋಕ ದಳ ಕೂಡ ಸ್ವಲ್ಪ ಯಶಸ್ಸು ಕಂಡಿದೆ.

ಕಾಂಗ್ರೆಸ್ ಮತ್ತು ಬಿಜೆಪಿಯ ಮಿತ್ರಪಕ್ಷ ಜನನಾಯಕ ಜನತಾ ಪಕ್ಷವು ಪಕ್ಷದ ಚಿಹ್ನೆಗಳ ಆಧಾರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.

ಚುನಾವಣಾ ಫಲಿತಾಂಶವು, 2024ರ ಲೋಕಸಭಾ ಚುನಾವಣೆಗೆ ಮುನ್ನ ಆಡಳಿತಾರೂಢ ಬಿಜೆಪಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಡುತ್ತಾರೆ. ಆದರೆ, ರಾಜ್ಯದ ಇತರ ಜಿಲ್ಲೆಗಳಲ್ಲಿ 150ಕ್ಕೂ ಅಧಿಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜಯಿಯಾಗಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ.

ಆದಮ್ಪುರ ವಿಧಾನಸಭಾ (Adampur Assembly)ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಮರುಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿತ್ತು. ಅದಾದ ಕೆಲವೇ ದಿನಗಳಲ್ಲಿ ಈ ಫಲಿತಾಂಶ ಬಂದಿದೆ.

ಪಂಚಕುಳ (Panchkula) ಜಿಲ್ಲೆಯಲ್ಲಿ, ಸ್ಪರ್ಧಿಸಿದ ಎಲ್ಲಾ 10 ಸ್ಥಾನಗಳಲ್ಲೂ ಬಿಜೆಪಿ ಸೋತಿದೆ. ಸೀರ್ಸ ಜಿಲ್ಲೆಯಲ್ಲೂ ಅದು ತಾನು ಸ್ಪರ್ಧಿಸಿದ ಎಲ್ಲಾ 10 ಸ್ಥಾನಗಳಲ್ಲಿ ಸೋಲನುಭವಿಸಿದೆ.

ಚುನಾವಣೆಯಲ್ಲಿ 126 ಪಕ್ಷೇತರರು ಜಯಶಾಲಿಗಳಾಗಿದ್ದು, ಅವರ ಪೈಕಿ ಹೆಚ್ಚಿನವರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಪಕ್ಷ ಹೇಳಿದೆ. ಹಾಗಾಗಿ, 22 ಜಿಲ್ಲಾ ಪರಿಷತ್ ಗಳ ಒಟ್ಟು 411ಸ್ಥಾನಗಳ ಪೈಕಿ, ಬಿಜೆಪಿಗೆ 300 ವಿಜಯಿ ಅಭ್ಯರ್ಥಿಗಳ ಬೆಂಬಲವಿದೆ ಎಂದು ಅದು ಹೇಳಿದೆ.

Similar News