ಏಮ್ಸ್ ಸರ್ವರ್ ಗೆ ರ‍್ಯಾನ್ಸಮ್‌ವೇರ್‌ ದಾಳಿ: 200 ಕೋ.ರೂ. ಬೇಡಿಕೆ ಇರಿಸಿದ್ದ ಹ್ಯಾಕರ್

Update: 2022-11-28 16:46 GMT

ಹೊಸದಿಲ್ಲಿ, ನ. 28:  ದಿಲ್ಲಿ ಏಮ್ಸ್ ನ  ಸರ್ವರ್ ರ‍್ಯಾನ್ಸಮ್‌ವೇರ್‌ (Server Ransomware) ದಾಳಿಯಾದ ಬಳಿಕ ಹ್ಯಾಕರ್ಗಳು ಅಂದಾಜು 200 ಕೋ. ರೂ.ಯನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ನೀಡಬೇಕು ಎಂದು ಏಮ್ಸ್ ಮುಂದೆ  ಬೇಡಿಕೆ ಇರಿಸಿದ್ದರು ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.

ಸರ್ವರ್ ಡೌನ್ ಆಗಿರುವುದರಿಂದ ತುರ್ತು ಚಿಕಿತ್ಸಾ ಘಟಕದಲ್ಲಿ ರೋಗಿಗಳ ಸೇವೆ, ಹೊರ ರೋಗಿ, ಒಳ ರೋಗಿಗಳ ಹಾಗೂ ಪ್ರಯೋಗಾಲಯದ ಘಟಕಗಳಲ್ಲಿ ಸೇವೆಯನ್ನು ಸಿಬ್ಬಂದಿ ಕಂಪ್ಯೂಟರ್ ರಹಿತವಾಗಿ ನಿರ್ವಹಿಸಿದರು.

ರ‍್ಯಾನ್ಸಮ್‌ವೇರ್‌ ದಾಳಿಯ ಕುರಿತು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್ಟಿ-ಇನ್), ದಿಲ್ಲಿ ಪೊಲೀಸ್  ಹಾಗೂ ಗೃಹ ಸಚಿವಾಲಯದ ಪ್ರತಿನಿಧಿಗಳು ತನಿಖೆ ನಡೆಸುತ್ತಿದ್ದಾರೆ.

ದಿಲ್ಲಿ ಪೊಲೀಸ್ ನ ಇಂಟಲಿಜೆನ್ಸ್ ಫ್ಯೂಸನ್ ಆ್ಯಂಡ್ ಸ್ಟ್ರಾಟೆಜಿಕ್ ಆಪರೇಷನ್ಸ್ (ಐಎಫ್ಎಸ್ಒ) ನವೆಂಬರ್ 25ರಂದು ಸುಲಿಗೆ ಹಾಗೂ ಸೈಬರ್ ಭಯೋತ್ಪಾದನೆಯ ಪ್ರಕರಣ ದಾಖಲಿಸಿದೆ.

ತನಿಖಾ ಸಂಸ್ಥೆಗಳ ಶಿಫಾರಸಿನಂತೆ ಆಸ್ಪತ್ರೆಯಲ್ಲಿರುವ ಕಂಪ್ಯೂಟರ್ಗಳ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಅವು ತಿಳಿಸಿವೆ. ಏಮ್ಸ್ ಸರ್ವರ್ ನಲ್ಲಿ ಮಾಜಿ ಪ್ರಧಾನಿಗಳು, ಸಚಿವರು, ಅಧಿಕಾರಿಗಳು ಹಾಗೂ ನ್ಯಾಯಾಧೀಶರು ಸೇರಿದಂತೆ ಹಲವು ಗಣ್ಯರ ದತ್ತಾಂಶಗಳನ್ನು ದಾಸ್ತಾನು ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.  

Similar News