ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆ ಬಿಡುಗಡೆಗೊಳಿಸಲಿರುವ ಭಾರತ ಬಯೊಟೆಕ್‌

Update: 2022-11-28 16:55 GMT

ಹೊಸದಿಲ್ಲಿ,ನ.28: ಭಾರತ ಬಯೊಟೆಕ್(Bharat Biotech) ಅಭಿವೃದ್ಧಿಗೊಳಿಸಿರುವ ಸೂಜಿರಹಿತ,ಮೂಗಿನ ಮೂಲಕ ನೀಡಬಹುದಾದ ಇಂಟ್ರಾನೇಸಲ್ ಕೋವಿಡ್(Intranasal covid) ಲಸಿಕೆ ‘ಇನ್ಕೋವ್ಯಾಕ್’(Incovac)ಗೆ ತುರ್ತು ಸಂದರ್ಭಗಳಲ್ಲಿ 18 ವರ್ಷಕ್ಕೆ ಮೇಲ್ಪಟ್ಟವರಲ್ಲಿ ನಿರ್ಬಂಧಿತ ಬಳಕೆಗಾಗಿ ಅನುಮತಿ ಲಭಿಸಿದೆ. ಇನ್ಕೋವ್ಯಾಕ್ ವಿಶ್ವದ ಮೊದಲ ಇಂಟ್ರಾನೇಸಲ್ ಲಸಿಕೆ ಆಗಲಿದೆ.

 ಕೇಂದ್ರೀಯ ಔಷಧಿಗಳ ಮಾನದಂಡ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಒ)ಯು ಇನ್ಕೋವ್ಯಾಕ್ ಅನ್ನು ಪ್ರಾಥಮಿಕ ಸರಣಿ  ಮತ್ತು ಭಿನ್ನ ಬೂಸ್ಟರ್ ಆಗಿ ಬಳಸಲು ಹಸಿರು ನಿಶಾನೆಯನ್ನು ತೋರಿಸಿದೆ.

ಇನ್ಕೋವ್ಯಾಕ್ ಸುರಕ್ಷಿತವಾಗಿದೆ ಎನ್ನುವುದು ಕ್ಲಿನಿಕಲ್ ಟ್ರಯಲ್ ಗಳಲ್ಲಿ ಸಾಬೀತಾಗಿದೆ ಎಂದು ಭಾರತ ಬಯೊಟೆಕ್ ಹೇಳಿಕೆಯಲ್ಲಿ ತಿಳಿಸಿದೆ. ಈ ಹಿಂದೆ ಕೋವಿಡ್ ಲಸಿಕೆಯ ಎರಡು ಡೋಸ್ ಗಳನ್ನು ತೆಗೆದುಕೊಂಡವರಲ್ಲಿ ಇನ್ಕೋವ್ಯಾಕ್ ಲಸಿಕೆಯನ್ನು ಪ್ರಾಥಮಿಕ ಡೋಸ್ ಮತ್ತು ಭಿನ್ನ ಬೂಸ್ಟರ್ ಡೋಸ್ ಆಗಿ ಪರೀಕ್ಷಿಸಲಾಗಿದೆ ಎಂದು ಅದು ಹೇಳಿದೆಯಾದರೂ,ಈವರೆಗೆ ಪರಿಣಾಮಕಾರಿತ್ವದ ಯಾವುದೇ ದತ್ತಾಂಶಗಳನ್ನು ಒದಗಿಸಿಲ್ಲ.

ಇನ್ಕೋವ್ಯಾಕ್ ಪ್ರಭೇದ-ನಿರ್ದಿಷ್ಟ ಲಸಿಕೆಗಳ ಅಭಿವೃದ್ಧಿಯನ್ನು ತ್ವರಿತಗೊಳಿಸುವ ಮತ್ತು ಹೊಸ ಪ್ರಭೇದಗಳ ವಿರುದ್ಧ ಸಾಮೂಹಿಕ ಪ್ರತಿರೋಧಕತೆಯನ್ನು ಸಾಧ್ಯವಾಗಿಸಲು ಮೂಗಿನ ಮೂಲಕ ಸುಲಭವಾಗಿ ನೀಡಬಹುದಾದ ಅವಳಿ ಲಾಭಗಳನ್ನು ಒದಗಿಸುತ್ತದೆ. ನೂತನ ಲಸಿಕೆಯು ಸಾಂಕ್ರಾಮಿಕಗಳು ಮತ್ತು ಸ್ಥಳೀಯ ರೋಗಗಳ ಸಂದರ್ಭಗಳಲ್ಲಿ ಸಾಮೂಹಿಕ ಲಸಿಕೆ ವಿತರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಕಂಪನಿಯು ತಿಳಿಸಿದೆ.

Similar News