ಮಣಿಪಾಲ ವಿವಿಯಲ್ಲಿ ನಡೆದ ಘಟನೆಗೆ ಎಐಡಿಎಸ್‌ಒ ಖಂಡನೆ

Update: 2022-11-29 09:07 GMT

ಮಂಗಳೂರು, ನ.29: ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಪೂರ್ವಗ್ರಹ ಪೀಡಿತ ಘಟನೆಯ ಕುರಿತು ಎಐಡಿಎಸ್‌ಒ ವಿಷಾದ ವ್ಯಕ್ತಪಡಿಸುತ್ತದೆ ಎಂದು ಸಂಘಟನೆಯ ದ.ಕ. ಜಿಲ್ಲಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

ಘಟನೆಯ ಕುರಿತು ವಿಚಾರಣೆಗೆ ಆದೇಶ ಹೊರಡಿಸಲಾಗಿದೆ ಮತ್ತು ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ. ಒಬ್ಬ ವ್ಯಕ್ತಿಯನ್ನು ಆತನ ಧರ್ಮದ ಸಲುವಾಗಿ ನಿಂದಿಸುವ ಘಟನೆಯು ಒಂದು ವಿಶ್ವವಿದ್ಯಾನಿಲಯ ಅಥವಾ ಕಾಲೇಜಿಗೆ ಮಾತ್ರ ಸೀಮಿತವಾಗಿಲ್ಲ. ರಾಜಕೀಯ ಪಕ್ಷಗಳು ಮತ್ತಿವರ ಸಂಘಟನೆಗಳು ಚುನಾವಣಾ ಲಾಭಕ್ಕಾಗಿ ಧರ್ಮವನ್ನು ರಾಜಕೀಯದಲ್ಲಿ ಮತ್ತು ಶಿಕ್ಷಣದಂತಹ ಸಾಮಾಜಿಕ ವಿಷಯಗಳಲ್ಲಿ ಬೆರೆಸುವ ಪಿತೂರಿ ಹಲವು ವರ್ಷಗಳಿಂದ ಕರಾವಳಿಯಲ್ಲಿ ನಡೆಯುತ್ತಿದೆ. ಸಾಮಾಜಿಕ ನ್ಯಾಯ ರೂಪಿಸುವಲ್ಲಿ ಧರ್ಮಕ್ಕೆ ಯಾವುದೇ ಹಕ್ಕು ಇಲ್ಲ ಎಂದು ವಿವೇಕಾನಂದರು ಹೇಳಿದ್ದರು. ಧರ್ಮವನ್ನು ಶಿಕ್ಷಣದಿಂದ ದೂರವಿಡಬೇಕು ಎಂದು ನೇತಾಜಿ ಪ್ರತಿಪಾದಿಸಿದ್ದರು. ಆದರೆ, ಈ ಮಹಾನ್ ವ್ಯಕ್ತಿಗಳ ಆಶಯಕ್ಕೆ ವ್ಯತಿರಿಕ್ತವಾಗಿ ಆಳುವ ಸರ್ಕಾರಗಳು ಧರ್ಮವನ್ನು ಶಿಕ್ಷಣದಲ್ಲಿ ಬೆರೆಸುತತಿವೆ. ಸಮಾಜದ ಧರ್ಮನಿರಪೇಕ್ಷ ವಾತಾವರಣವನ್ನು ಮತ್ತಷ್ಟು ಹಾಳುಗೆಡವಲು ಎಲ್ಲ ಸರ್ಕಾರಗಳು ಟೊಂಕ ಕಟ್ಟಿ ನಿಂತಿವೆ.

ಧರ್ಮನಿರಪೇಕ್ಷ ಹಾಗೂ ಪ್ರಜಾತಾಂತ್ರಿಕ ಶಿಕ್ಷಣದ ಆಶಯವನ್ನು ಉಳಿಸಲು ರಾಜ್ಯದ ಎಲ್ಲ ವಿದ್ಯಾರ್ಥಿಗಳು, ಉಪನ್ಯಾಸಕರು ಮತುತಿ ಶಿಕ್ಷಣ ಪ್ರೇಮಿ ಜನತೆ ಒಂದಾಗಿ, ಜನರಲ್ಲಿ ಒಡಕು ತರುವ ಪಿತೂರಿಗಳನ್ನು ಹಿಮ್ಮೆಟ್ಟಿಸಲು ಹೋರಾಟಕ್ಕೆ ಸಜ್ಜಾಗಬೇಕು ಎಂದು ಎಐಡಿಎಸ್‌ಒದ ದ.ಕ. ಜಿಲ್ಲಾ ಸಂಚಾಲಕ ವಿನಯ ಚಂದ್ರ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Similar News