ಮಲ್ಲಿಕಾರ್ಜುನ್‌ ಖರ್ಗೆ ಕ್ಷಮೆಯಾಚಿಸುವಂತೆ ಬಲಪಂಥೀಯರಿಂದ ಟ್ವಿಟರ್‌ ಅಭಿಯಾನ

Update: 2022-11-29 11:58 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಂಕಾಧಿಪತಿ ರಾವಣನಂತೆ ನೂರು ತಲೆ ಇದೆಯೇ ಎಂದು ಪ್ರಶ್ನಿಸಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿದೆ. ಪ್ರಧಾನಿ ಮೋದಿಯನ್ನು ರಾವಣನಿಗೆ ಹೋಲಿಸಲಾಗಿದೆ ಎಂದು ಆರೋಪಿಸಿ ಬಲಪಂಥೀಯರು ಟ್ವಿಟರ್‌ ನಲ್ಲಿ ಖರ್ಗೆ ವಿರುದ್ಧ ಮುಗಿಬಿದ್ದಿದ್ದು, ಕ್ಷಮೆ ಕೇಳುವಂತೆ ಖರ್ಗೆಗೆ ಆಗ್ರಹಿಸಿದ್ದಾರೆ.

ಪ್ರತಿ ಚುನಾವಣೆಗೂ  ಪ್ರಧಾನಿ ಮೋದಿಯವರ ಮೇಲೆ ಹೆಚ್ಚು ಅವಲಂಬಿತವಾಗಿರುವ ಬಿಜೆಪಿಯ ವಿರುದ್ದ ಗುಜರಾತಿನ  ಬೆಹ್ರಾಂಪುರದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ, “ಕಾರ್ಪೊರೇಷನ್ ಚುನಾವಣೆಗಳು, ಎಂಎಲ್‌ಎ ಚುನಾವಣೆಗಳು ಅಥವಾ ಎಂಪಿ ಚುನಾವಣೆಗಳಲ್ಲಿ ನಿಮ್ಮ (ಮೋದಿ) ಮುಖವನ್ನು ನಾವು ಎಲ್ಲೆಡೆ ನೋಡುತ್ತೇವೆ… ರಾವಣನಂತೆ ನಿಮ್ಮ  ಬಳಿ  100 ತಲೆಗಳಿವೆಯೇ?" ಎಂದು ಪ್ರಶ್ನಿಸಿದ್ದರು.

ಇದನ್ನೇ ಪ್ರಧಾನಿಯನ್ನು ರಾವಣನಿಗೆ ಹೋಲಿಸಲಾಗಿದೆ ಎಂದು ಆರೋಪಿಸಿ, ಖರ್ಗೆ ಹಾಗೂ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಹ್ಯಾಷ್‌ಟ್ಯಾಗ್‌ ಟ್ರೆಂಡ್‌ ಮಾಡಿದೆ.

#MaafiMaangoKharge ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಖರ್ಗೆ ವಿರುದ್ಧ ಕಿಡಿಕಾರುತ್ತಿರುವ ಮೋದಿ ಬೆಂಬಲಿಗರು ಕಾಂಗ್ರೆಸ್‌ ಭಯೋತ್ಪಾದಕರಿಗೆ ಗೌರವ ಕೊಡುತ್ತದೆ, ಪ್ರಧಾನಿಗೆ ಗೌರವ ಕೊಡುತ್ತಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ.

“ಕಾಂಗ್ರೆಸ್ ಭಯೋತ್ಪಾದಕರಿಗೆ ಗೌರವವನ್ನು ನೀಡುತ್ತದೆ ಮತ್ತು ಝಾಕಿರ್ ನಾಯಕ್‌ನಂತಹ ದ್ವೇಷ-ಬೋಧಕರನ್ನು ಬೆಂಬಲಿಸುತ್ತದೆ ಆದರೆ ಶತಕೋಟಿ ಭಾರತೀಯರ ಚುನಾಯಿತ ಪ್ರಧಾನಿಯನ್ನು ಅವಮಾನಿಸುವುದನ್ನು ಮುಂದುವರೆಸಿದೆ. ಒಬಿಸಿ ಸಮುದಾಯದ ಒಬ್ಬ ಬಡ “ಚಾಯ್‌ವಾಲಾ” ಭಾರತದ ಪ್ರಧಾನಿಯಾದುದನ್ನು ಕಾಂಗ್ರೆಸ್ ಧಿಕ್ಕರಿಸುತ್ತದೆ, ಆದ್ದರಿಂದ ಅವರು ಅವರನ್ನು ಮತ್ತೆ ಮತ್ತೆ ಅವಮಾನಿಸುತ್ತಲೇ ಇದ್ದಾರೆ!.” ಎಂದು ಗುಜರಾತ್‌ ಬಿಜೆಪಿ ಸಾಮಾಜಿಕ ಮಾಧ್ಯಮ ಸಹ ಸಂಚಾಲಕ ಮನಾನ್‌ ದನಿ ಟ್ವೀಟ್‌ ಮಾಡಿದ್ದಾರೆ.

Similar News