ʼಪಾಲಾರ್‌ʼ ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲಾಗಲಿ: ‌ʼದಲಿತರ ಕಥೆʼ ಆಧರಿಸಿದ ಚಿತ್ರಕ್ಕೆ ಪಾ. ರಂಜಿತ್ ಹಾರೈಕೆ

Update: 2022-11-29 14:17 GMT

ಬೆಂಗಳೂರು: ನೈಜ ಘಟನೆಯನ್ನಾಧರಿಸಿದ ಚಿತ್ರ ಎಂದು ಹೇಳಲಾಗುವ ಕನ್ನಡದ ʼಪಾಲಾರ್‌ʼ ಚಿತ್ರಕ್ಕೆ ತಮಿಳಿನ ಖ್ಯಾತ ನಿರ್ದೇಶಕ ಪಾ. ರಂಜಿತ್‌ ಬೆಂಬಲ ಸೂಚಿಸಿದ್ದಾರೆ. ದಲಿತ ದೌರ್ಜನ್ಯ ಮತ್ತು ಭೂಮಿ ಒಡೆತನದ ಕಥಾ ಹಂದರವನ್ನು ಹೊಂದಿರುವ ಪಾಲರ್‌ ಅನ್ನು ಯುವ ನಿರ್ದೇಶಕ ಜೀವಾ ನವೀನ್ ನಿರ್ದೇಶಿಸಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ನಡೆದ ಸತ್ಯ ಘಟನೆಗಳ ಆಧಾರಿತ ಕತೆ ಎಂದು ಹೇಳಿರುವ ಪಾಲಾರ್ ಚಿತ್ರದಲ್ಲಿ ‘ಸಿನಿಮಾ ಬಂಡಿ’ ಖ್ಯಾತಿಯ ನಟಿ, ಗಾಯಕಿ ವೈ.ಜಿ.ಉಮಾ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಸೌನವಿ ಕ್ರಿಯೇಷನ್ಸ್‌ ಸಂಸ್ಥೆ ಚಿತ್ರದ ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿದೆ.

ಇದನ್ನೂ ಓದಿ: ಪಾ. ರಂಜಿತ್‌ ಎಂಬ ನೀಲ ಬೆಳಕು: ತಮಿಳು ಚಿತ್ರೋದ್ಯಮದಲ್ಲಿ ಅಂಬೇಡ್ಕರ್‌ ದನಿಗೆ ದಶಕದ ಸಂಭ್ರಮ

ಚಿತ್ರ ಹೇಳಲು ಹೊರಟಿರುವ ಕಥೆಯ ಕಾರಣಕ್ಕಾಗಿಯೇ ನಿರೀಕ್ಷೆ ಹುಟ್ಟಿಸಿರುವ ʼಪಾಲಾರ್‌ʼ ಚಿತ್ರದ ಟ್ರೇಲರ್‌ ಅನ್ನು ಪಾ. ರಂಜಿತ್‌ ಬಿಡುಗಡೆಗೊಳಿಸಿದ್ದು, ಪಾಲಾರ್ ಸಿನಿಮಾ ಕನ್ನಡ ಚಲನಚಿತ್ರರಂಗದಲ್ಲಿ ಮೈಲಿಗಲ್ಲು ಆಗಲಿ ಎಂದು ಶುಭ ಕೋರುತ್ತೇನೆ’ ಎಂದು ಅವರು ಹೇಳಿದ್ದಾರೆ

 ಅಂಬೇಡ್ಕರ್‌ ವಾದಿಯಾಗಿರುವ ಪಾ. ರಂಜಿತ್‌, ತಮ್ಮ ಸಿನೆಮಾ ಮೂಲಕ ಅಂಬೇಡ್ಕರ್‌ ವಾದಿ ರಾಜಕೀಯವನ್ನು ಶಕ್ತವಾಗಿ ಕಟ್ಟಿಕೊಟ್ಟವರು. ಈ ಹಿನ್ನೆಲೆಯಲ್ಲಿ ರಂಜಿತ್ ಬೆಂಬಲ‌ ನೀಡಿರುವ ಕಾರಣಕ್ಕೆ ಪಾಲಾರ್‌ ಇನ್ನಷ್ಟು ಗಮನ ಸೆಳೆದಿದೆ.

ವರದಿಗಳ ಪ್ರಕಾರ, ಮೂರು ತಿಂಗಳ ಹಿಂದೆಯೇ ಪಾಲಾರ್‌ ಚಿತ್ರದ ಟ್ರೇಲರ್ ಬಿಡುಗಡೆಯಾಗಬೇಕಿತ್ತು. ಆದರೆ ದಲಿತರ ಕಥೆ ಎಂಬ ಕಾರಣಕ್ಕೆ ಆಡಿಯೋ ಕಂಪನಿಗಳು ಟ್ರೇಲರ್ ಬಿಡುಗಡೆಗೆ ಹಿಂಜರಿಯುತ್ತಿವೆ ಎಂದು ಜೀವಾ ನವೀನ್ ಆರೋಪಿಸಿದ್ದರು. 

Full View

Similar News