ಗುಜರಾತ್ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಎಎಪಿಯ ಹೆಸರು ಇರುವುದಿಲ್ಲ: ಅಮಿತ್ ಶಾ

Update: 2022-11-30 09:27 GMT

ಅಹಮದಾಬಾದ್: ಅರವಿಂದ ಕೇಜ್ರಿವಾಲ್ ಅವರ ಪಕ್ಷವು ತನ್ನ ಖಾತೆಯನ್ನು ತೆರೆಯದಿರಲೂಬಹುದು ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ Amit Shah ಅವರು ಗುಜರಾತ್ ಚುನಾವಣೆಯಲ್ಲಿ ಎಎಪಿಯ ಸವಾಲೊಡ್ಡದು ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ, ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗುಜರಾತ್‌ನ ಸರ್ವತೋಮುಖ ಅಭಿವೃದ್ಧಿ ಮತ್ತು ಶೂನ್ಯ ತುಷ್ಟೀಕರಣ ನೀತಿಯ ಅನುಷ್ಠಾನವು ಜನರು ಕಳೆದ 27 ವರ್ಷಗಳಲ್ಲಿ ಬಿಜೆಪಿಯಲ್ಲಿ ಪದೇ ಪದೇ ನಂಬಿಕೆ ಇಡಲು ಮುಖ್ಯ ಕಾರಣ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಶಾ ವಿವರಿಸಿದ್ದಾರೆ..

"ಗುಜರಾತ್‌ನಲ್ಲಿ ಬಿಜೆಪಿ ಅಭೂತಪೂರ್ವ ವಿಜಯವನ್ನು ದಾಖಲಿಸಲಿದೆ. ಜನರು ನಮ್ಮ ಪಕ್ಷ ಮತ್ತು ನಮ್ಮ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಸಂಪೂರ್ಣ ನಂಬಿಕೆ ಹೊಂದಿದ್ದಾರೆ" ಎಂದು ದಿನಕ್ಕೆ ಐದು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುತ್ತಿರುವ ಶಾ ಹೇಳಿದರು.

ಎಎಪಿ ಗುಜರಾತ್ ವಿಧಾನಸಭಾ ಚುನಾವಣೆಗೆ ಪ್ರವೇಶಿಸುವ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ನಾಯಕ, "ಪ್ರತಿಯೊಂದು ಪಕ್ಷಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ, ಆದರೆ  ಪಕ್ಷವನ್ನು ಸ್ವೀಕರಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದು ಜನರಿಗೆ ಬಿಟ್ಟದ್ದು" ಎಂದು ಹೇಳಿದರು.

"ಎಎಪಿ ಗುಜರಾತ್ ಜನರ ಮನಸ್ಸಿನಲ್ಲಿ ಎಲ್ಲಿಯೂ ಇಲ್ಲ. ಚುನಾವಣಾ ಫಲಿತಾಂಶಗಳಿಗಾಗಿ ನಿರೀಕ್ಷಿಸಿ, ಬಹುಶಃ ಗೆದ್ದ ಅಭ್ಯರ್ಥಿಗಳ ಪಟ್ಟಿಯಲ್ಲಿ ಎಎಪಿಯ ಹೆಸರು ಇರುವುದಿಲ್ಲ" ಎಂದು ಅವರು ಹೇಳಿದರು.

Similar News