‘ಕಾನೂನುಬಾಹಿರ ಚಟುವಟಿಕೆಗಳ’ ಸಾಬೀತಿಗೆ ಪೊಲೀಸ್ ವಿಫಲ :ಪಿಎಫ್ಐಯ 8 ಮಂದಿಗೆ ಜಾಮೀನು

Update: 2022-11-30 15:50 GMT

ಹೊಸದಿಲ್ಲಿ, ನ. 30: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI)ದ ಮೇಲಿನ ನಿಷೇಧಕ್ಕೆ ಸಂಬಂಧಿಸಿದ ಪ್ರಕರಣವೊಂದರ 8 ಆರೋಪಿಗಳಿಗೆ ದಿಲ್ಲಿಯ ನ್ಯಾಯಾಲಯವೊಂದು ಸೋಮವಾರ ಜಾಮೀನು ನೀಡಿದೆ. ಅಪರಾಧ ನಡೆದಿದೆಯೆನ್ನಲಾದ ಸಮಯದಲ್ಲಿ ಆರೋಪಿಗಳು ತಿಹಾರ್ ಜೈಲಿ(Tihar Jail)ನಲ್ಲಿ ಬಂಧನದಲ್ಲಿರುವಾಗ, ‘ಕಾನೂನುಬಾಹಿರ ಚಟುವಟಿಕೆಗಳಲ್ಲಿ’(In 'illegal activities') ತೊಡಗುವುದು ಹೇಗೆ ಎನ್ನುವುದನ್ನು ವಿವರಿಸಲು ಪೊಲೀಸರು ವಿಫಲರಾದ ಬಳಿಕ ಅವರಿಗೆ ಜಾಮೀನು ಮಂಜೂರಾಗಿದೆ.

ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿವೆ ಎಂಬ ಆರೋಪದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ, ಕೇಂದ್ರ ಸರಕಾರವು ಸೆಪ್ಟಂಬರ್ 28ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹ ಸಂಘಟನೆಗಳನ್ನು ಐದು ವರ್ಷದ ಅವಧಿಗೆ ನಿಷೇಧಿಸಿದೆ.

ಸೆಪ್ಟಂಬರ್ 29ರಂದು ದಿಲ್ಲಿಯ ಶಾಹೀನ್ ಬಾಗ್(Shaheen Bagh) ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಈ ಎಂಟು ಮಂದಿಯನ್ನು ಆರೋಪಿಗಳಾಗಿ ಹೆಸರಿಸಲಾಗಿತ್ತು. ‘‘ಅವರು ಕಾನೂನುಬಾಹಿರ ಸಂಘಟನೆ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ)ಯ ಯಾವುದೇ ಕಾನೂನುಬಾಹಿರ ಚಟುವಟಿಕೆಗೆ ಪ್ರೇರಣೆ, ಪ್ರಚೋದನೆ ಮತ್ತು ನೆರವು ನೀಡುತ್ತಿದ್ದರು ಎಂಬುದಾಗಿ ಪ್ರಕರಣಕ್ಕೆ ಸಂಬಂಧಿಸಿದ ಮೊದಲ ಮಾಹಿತಿ ವರದಿ (FRI)ಯಲ್ಲಿ ಆರೋಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮುಹಮ್ಮದ್ ಶುಐಬ್, ಅಬ್ದುಲ್ ರಬ್, ಹಬೀಬ್ ಅಸ್ಘರ್ ಜಮಾಲಿ ಮತ್ತು ಮುಹಮ್ಮದ್ ವಾರಿಸ್ ಖಾನ್ ರನ್ನು ಪೊಲೀಸರು ಅಕ್ಟೋಬರ್ 3ರಂದು ಬಂಧಿಸಿದ್ದರು. ನಿಷೇಧಿತ ಸಂಘಟನೆಯ ಆರು ಧ್ವಜಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂಬುದಾಗಿ ಪೊಲೀಸರು ಹೇಳಿದ್ದರು. ಎರಡು ದಿನಗಳ ಬಳಿಕ, ಪೊಲೀಸರು ಇತರ ನಾಲ್ವರನ್ನು-ಅಬ್ದುಲ್ಲಾ, ಶೇಖ್ ಗುಲ್ಫಮ್ ಹುಸೈನ್, ಮುಹಮ್ಮದ್ ಶುಐಬ್ ಮತ್ತು ಮುಹ್ಸಿನ್ ವಕಾರ್- ಬಂಧಿಸಿದ್ದರು. ಅವರು ಪಿಎಫ್ಐ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದರು ಹಾಗೂ ಅವರಲ್ಲಿ ಪಿಎಫ್ಐನ ಧ್ವಜಗಳು ಮತ್ತು ಕರಪತ್ರಗಳಿದ್ದವು ಎಂಬುದಾಗಿ ಪೊಲೀಸರು ಆರೋಪಿಸಿದ್ದಾರೆ.

ಆದರೆ, ಸೋಮವಾರದ ವಿಚಾರಣೆಯ ವೇಳೆ, ಪಿಎಫ್ಐ ನಿಷೇಧ ಜಾರಿಯಾದಾಗ ಆರೋಪಿಗಳು ಮುಂಜಾಗರೂಕತಾ ಬಂಧನದಲ್ಲಿದ್ದರು ಎನ್ನುವುದನ್ನು ಪೊಲೀಸ್ ದಾಖಲೆಗಳು ತೋರಿಸುತ್ತಿವೆ ಎಂದು ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಸಂಜಯ್ ಖನಗ್ವಾಲ್ (Sanjay Khanagwal)ಹೇಳಿದರು.

ಆರೋಪಿಗಳನ್ನು ಸೆಪ್ಟಂಬರ್ 27ರಂದು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು ಹಾಗೂ ಅವರನ್ನು ಅಕ್ಟೋಬರ್ 2 ಮತ್ತು 4ರಂದು ಬಿಡುಗಡೆ ಮಾಡಲಾಗಿತ್ತು. ಬಳಿಕ, ಅವರನ್ನು ಶೀಘ್ರವೇ ಅಕ್ಟೋಬರ್ 3 ಮತ್ತು 5ರ ಮುಂಜಾನೆಗಳಂದು ಮರುಬಂಧಿಸಲಾಗಿತ್ತು ಎನ್ನುವುದನ್ನೂ ನ್ಯಾಯಾಧೀಶರು ಗಮನಿಸಿದರು.

ಪೊಲೀಸ್ ಸುಪರ್ದಿಯಲ್ಲಿರುವಾಗ ಆರೋಪಿಗಳು ಹೇಗೆ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿದ್ದಾರೆ ಎನ್ನುವುದನ್ನು ಸಾಬೀತುಪಡಿಸುವ ಪುರಾವೆಗಳನ್ನು ಹಾಜರುಪಡಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ತನ್ನ ಆದೇಶದಲ್ಲಿ ನ್ಯಾಯಾಧೀಶರು ಹೇಳಿದರು.

‘‘ನನ್ನ ಕಕ್ಷಿದಾರರನ್ನು ಪೊಲೀಸರು ಜೈಲಿನಿಂದಲೇ ಕಾನೂನುಬಾಹಿರವಾಗಿ ಎತ್ತಿಕೊಂಡು ಹೋಗಿದ್ದಾರೆ. ಪೊಲೀಸರು ನಮೂದಿಸಿರುವ ಸ್ಥಳಗಳಿಂದ ಅವರನ್ನು ಬಂಧಿಸಲಾಗಿಲ್ಲ’’ ಎಂದು ಆರೋಪಿಗಳ ಪರ ವಕೀಲ ಮುಜೀಬ್ ರೆಹಮಾನ್ ಹೇಳಿದರು. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ಕ್ಯಾಮರ ವೀಡಿಯೊಗಳನ್ನೂ ಅವರು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

Similar News