ಅಪಾರ್ಟ್‍ಮೆಂಟ್ ಕಟ್ಟಡದ ಲಿಫ್ಟ್ ನಲ್ಲಿ ಸಿಲುಕಿಕೊಂಡ 3 ಬಾಲಕಿಯರು; ಮಾಲಕರ ವಿರುದ್ಧ ಪ್ರಕರಣ ದಾಖಲು

Update: 2022-12-01 07:01 GMT

ಗಝಿಯಾಬಾದ್: ದಿಲ್ಲಿ ಸಮೀಪದ ಗಝಿಯಾಬಾದ್‍ನಲ್ಲಿನ ಅಪಾರ್ಟ್‍ಮೆಂಟ್ ಕಟ್ಟಡವೊಂದರ ಲಿಫ್ಟ್‍ನಲ್ಲಿ ಮೂವರು ಬಾಲಕಿಯರು ಸುಮಾರು 25 ನಿಮಿಷಗಳ ಕಾಲ ಸಿಲುಕಿಕೊಂಡ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಗಳಲ್ಲಿ ಬಾಲಕಿಯರು ಲಿಫ್ಟ್ ನೊಳಗೆ ಸಿಲುಕಿ ಅಳುತ್ತಿರುವುದು ಕಾಣಿಸುತ್ತದೆ. ಅಪಾರ್ಟ್‍ಮೆಂಟ್ ಕಟ್ಟಡದ ಮಾಲಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಘಟನೆ ಗಝಿಯಾಬಾದ್‍ನ ಅಸ್ಸೋಟೆಕ್ ದಿ ನೆಸ್ಟ್ ಕಟ್ಟಡದಲ್ಲಿ ನವೆಂಬರ್ 29 ರಂದು  ನಡೆದಿದೆ. ಎಂಟರಿಂದ ಒಂಬತ್ತು ವರ್ಷದ ಬಾಲಕಿಯರು ಲಿಫ್ಟ್ ಬಾಗಿಲುಗಳನ್ನು ಬಲವಂತವಾಗಿ ತೆರೆಯಲು ಯತ್ನಿಸುತ್ತಿರುವುದು ಹಾಗೂ ಅದರಲ್ಲಿದ್ದ ಗುಂಡಿಗಳನ್ನು ಒತ್ತುತ್ತಿರುವುದು ಕಾಣಿಸುತ್ತದೆ. ಜೊತೆಗೆ ಬಾಲಕಿಯರು ಒಬ್ಬರನ್ನೊಬ್ಬರು ಸಮಾಧಾನಿಸುತ್ತಿರುವಂತೆಯೂ ಕಾಣಿಸುತ್ತದೆ. ಸುಮಾರು 20 ರಿಂದ 25 ನಿಮಿಷಗಳ ನಂತರ ಅವರಿಗೆ ಲಿಫ್ಟ್ ನಿಂದ ಹೊರಬರುವುದು ಸಾಧ್ಯವಾಗಿದೆ.

ಈ ಘಟನೆ ನಂತರ ಮಕ್ಕಳು ಲಿಫ್ಟ್ ಬಳಸಲು ಭಯ ಪಡುತ್ತಿದ್ದಾರೆ ಎಂದು ದೂರು ದಾಖಲಿಸಿರುವ ಬಾಲಕಿಯೊಬ್ಬಳ ತಂದೆ ಹೇಳಿದ್ದಾರೆ. ಆಗಾಗ ಜನರು ಲಿಫ್ಟ್ ನಲ್ಲಿ ಸಿಲುಕಿಕೊಂಡ ಘಟನೆ ನಡೆದಿದ್ದರೂ ಕಟ್ಟಡ ಮಾಲಕರು ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಇತ್ತೀಚಿಗಿನ ವರ್ಷಗಳಲ್ಲಿ ನೂರಾರು ಕಟ್ಟಡಗಳು ತಲೆಯೆತ್ತಿರುವ ನೊಯ್ಡಾ ಮತ್ತು ಗಝಿಯಾಬಾದ್ ಪ್ರದೇಶಗಳಲ್ಲಿ ಜನರು ಲಿಫ್ಟ್ ಗಳಲ್ಲಿ ಸಿಲುಕಿಕೊಳ್ಳುವ ಹಲವಾರು ಪ್ರಕರಣಗಳು ನಡೆಯುತ್ತಿವೆ ಎಂದು ವರದಿಯಾಗಿದೆ.

Similar News