ಇಂದು ಹಲವು ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಿದೆ ಸುಪ್ರೀಂ ಕೋರ್ಟಿನ ಮಹಿಳಾ ಪೀಠ

ಸುಪ್ರೀಂಕೋರ್ಟಿನ ಇತಿಹಾಸದಲ್ಲಿಯೇ ಮೂರನೇ ಬಾರಿ ಮಹಿಳಾ ನ್ಯಾಯಾಧೀಶರನ್ನೇ ಒಳಗೊಂಡ ಪೀಠ

Update: 2022-12-01 07:23 GMT

ಹೊಸದಿಲ್ಲಿ: ಸುಪ್ರೀಂ ಕೋರ್ಟಿನ ಇತಿಹಾಸದಲ್ಲಿಯೇ ಮೂರನೇ ಬಾರಿಗೆ ಇಂದು ಮಹಿಳಾ ನ್ಯಾಯಾಧೀಶರನ್ನೇ ಒಳಗೊಂಡ ಪೀಠ ಹಲವು ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಿದೆ.  ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಈ ಪೀಠವನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಬುಧವಾರ ರಚಿಸಿದ್ದರು.

ಸುಪ್ರೀಂ ಕೋರ್ಟಿನ ಮೊದಲ ಮಹಿಳಾ ಪೀಠ 2013 ರಲ್ಲಿ ರಚಿಸಲಾಗಿತ್ತು ಆಗ ನ್ಯಾಯಮೂರ್ತಿಗಳಾದ ಗ್ಯಾನ್ ಸುಧಾ ಮಿಶ್ರಾ ಮತ್ತು ರಂಜನಾ ಪ್ರಕಾಶ್ ದೇಸಾಯಿ ಈ ಪೀಠದಲ್ಲಿದ್ದರೆ 2018 ರಲ್ಲಿ ರಚಿತವಾದ ಎರಡನೇ ಮಹಿಳಾ ಪೀಠದಲ್ಲಿ ನ್ಯಾಯಮೂರ್ತಿಗಳಾದ ಆರ್ ಬಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ಇದ್ದರು.

ಇಂದು ಕಾರ್ಯನಿರ್ವಹಿಸಲಿರುವ ಮಹಿಳಾ ಪೀಠದಲ್ಲಿ ನ್ಯಾಯಮೂರ್ತಿಗಳಾದ ಕೊಹ್ಲಿ ಮತ್ತು ತ್ರಿವೇದಿ ಅವರ ಮುಂದೆ 32 ಪ್ರಕರಣಗಳಿವೆ.  ಇವುಗಳಲ್ಲಿ 10 ವರ್ಗಾವಣೆಗೆ ಸಂಬಂಧಿಸಿದ್ದ ಅರ್ಜಿಗಳಾಗಿದ್ದರೆ 10 ಜಾಮೀನು ಅರ್ಜಿಗಳಾಗಿವೆ.

ಸುಪ್ರೀಂ ಕೋರ್ಟಿನಲ್ಲಿ ಪ್ರಸ್ತುತ ಮೂವರು ಮಹಿಳಾ ನ್ಯಾಯಾಧೀಶೆಯರಿದ್ದಾರೆ. ಜಸ್ಟಿಸ್ ಕೊಹ್ಲಿ ಹಾಗೂ ಜಸ್ಟಿಸ್ ತ್ರಿವೇದಿ ಹೊರತಾಗಿ ಜಸ್ಟಿಸ್ ಬಿ ವಿ ನಾಗರತ್ನ ಕೂಡ ಸುಪ್ರೀಂ ಕೋರ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗುವ ಮೊದಲು ಜಸ್ಟಿಸ್ ಕೊಹ್ಲಿ ಅವರು ತೆಲಂಗಾಣ ಹೈಕೋರ್ಟಿನ ಮುಖ್ಯು ನ್ಯಾಯಮೂರ್ತಿಯಾಗಿದ್ದರೆ ಜಸ್ಟಿಸ್ ತ್ರಿವೇದಿ ಅವರು ಗುಜರಾತ್ ಹೈಕೋರ್ಟ್ ನ್ಯಾಯಾಧೀಶೆಯಾಗಿದ್ದರು.

ಜಸ್ಟಿಸ್ ಕೊಹ್ಲಿ ಅವರ ಅವಧಿ ಸೆಪ್ಟೆಂಬರ್ 2024 ಗೆ ಅಂತ್ಯವಾಗಲಿದ್ದರೆ ಜಸ್ಟಿಸ್ ತ್ರಿವೇದಿ ಅವರ ಸೇವಾವಧಿ ಜೂನ್ 2025ರ ವರೆಗೆ ಇರಲಿದೆ. ಜಸ್ಟಿಸ್ ಬಿ ವಿ ನಾಗರತ್ನ ಅವರು 2027 ರಲ್ಲಿ ದೇಶದ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ಧಾರೆ.

ಜಸ್ಟಿಸ್ ಎಂ ಫಾತಿಮಾ ಬೀವಿ ಅವರು ಸುಪ್ರೀಂ ಕೋರ್ಟಿನ ಪ್ರಥಮ ಮಹಿಳಾ ನ್ಯಾಯಾಧೀಶೆಯಾಗಿ 1989 ರಲ್ಲಿ ಕಾರ್ಯನಿರ್ವಹಿಸಿದ್ದರು. ಅದಕ್ಕಿಂತ ಮೊದಲು ಅವರು ಕೇರಳ ಹೈಕೋರ್ಟ್ ನ್ಯಾಯಾಧೀಶೆಯಾಗಿದ್ದರು.

Similar News