ಗೋದಿ ಮೀಡಿಯಾದ ವಿರುದ್ಧ ಜನರೇ ಹೋರಾಡುವುದು ಅನಿವಾರ್ಯ: NDTV ಬಿಟ್ಟ ರವೀಶ್ ಕುಮಾರ್ ಸಂದೇಶ

"ನಮಸ್ಕಾರ್, ಮೈ ರವೀಶ್ ಕುಮಾರ್... "

Update: 2022-12-01 09:28 GMT

ಹೊಸದಿಲ್ಲಿ: ಅದಾನಿ ಸಂಸ್ಥೆಯ ತೆಕ್ಕೆಗೆ ಎನ್‍ಡಿಟಿವಿ ಇಂಡಿಯಾ ಸೇರಿದ ಬೆನ್ನಲ್ಲೇ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಹುದ್ದೆಗೆ ರಾಜೀನಾಮೆ ನೀಡಿದ ಖ್ಯಾತ ಪತ್ರಕರ್ತ ರವೀಶ್ ಕುಮಾರ್, ಇಂದು ತಮ್ಮ ಯುಟ್ಯೂಬ್ ವೀಡಿಯೋ ಮೂಲಕ ದೇಶದ ನಾಗರಿಕರಿಗೆ ಮನವಿಯೊಂದನ್ನು ಮಾಡಿದ್ದಾರೆ. "ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಗಂಭೀರ ಅಪಾಯವಿರುವಾಗ ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಪತ್ರಕರ್ತರನ್ನು ಬೆಂಬಲಿಸುವ ಕೆಲಸವನ್ನು ಜನರು ಮುಂದುವರಿಸಬೇಕು. ಈಗ ಜನರೇ ಉಳಿದೆಲ್ಲ ಮಾಧ್ಯಮ ಸಂಸ್ಥೆಗಳಿಗಿಂತ ದೊಡ್ಡ ಸಂಸ್ಥೆಯಾಗಿ ಬೆಳೆದಿದ್ದಾರೆ. ನೀವೇ  ಈಗ ಭರವಸೆಯ ಆಶಾಕಿರಣ. ಈಗ ಎಲ್ಲ ಸಂಪಾದಕರಿಗಿಂತ ದೊಡ್ಡ ಸಂಪಾದಕರು ಜನರು. ಹಾಗಾಗಿ ನೀವೇ ಗೋದಿ ಮೀಡಿಯಾದ ವಿರುದ್ಧ ಹೋರಾಡಲೇ ಬೇಕು. ಆ ಗುಲಾಮಿತನವನ್ನು ಕೊನೆಗೊಳಿಸಬೇಕು. ಇಲ್ಲದಿದ್ದರೆ ಈ ದೇಶದ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ.  ತನ್ನ ಕಿಸೆಗೆ ಡಾಲರ್ ಹಾಕಿಕೊಂಡು  ನಿಮ್ಮ ಕಿಸೆಗೆ ನಾಲ್ಕಾಣೆ ಹಾಕುವವರು ಈಗ ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ. ಇದರ ವಿರುದ್ಧ ಜನರೇ ಜಾಗೃತರಾಗಬೇಕು '' ಎಂದು ಅವರು ಕೋರಿದ್ದಾರೆ.

"ದೇಶದ ನ್ಯಾಯಾಂಗ ಎಡವಿದಾಗ ಹಾಗೂ ಅಧಿಕಾರದಲ್ಲಿರುವ ಜನರು ಹಲವರ ಸದ್ದಡಗಿಸಲು ಯತ್ನಿಸಿದಾಗ, ಈ ದೇಶದ ಜನರು ನನಗೆ ಅಪಾರ ಪ್ರೀತಿ ತೋರಿಸಿದರು. ನನ್ನ ಪ್ರೇಕ್ಷಕರಿಲ್ಲದೆ ನಾನು ಏನನ್ನೂ ಮಾಡಲು ಸಾಧ್ಯವಿಲ್ಲವಾಗಿತ್ತು. ನನ್ನ ಹೊಸ ಯುಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಪುಟದ ಮೂಲಕ ನಡೆಯುವ ನನ್ನ ಕೆಲಸವನ್ನು ಬೆಂಬಲಿಸುವುದನ್ನು ಮುಂದುವರಿಸಬೇಕು ಎಂದು ಈ ಜನರನ್ನು ಕೋರುತ್ತೇನೆ," ಎಂದು ತಮ್ಮ ಯುಟ್ಯೂಬ್ ವೀಡಿಯೋದಲ್ಲಿ ರವೀಶ್ ಹೇಳಿದ್ದಾರೆ.

NDTVಯಲ್ಲಿ ಅವರ ಕಾರ್ಯಕ್ರಮಗಳ ಆರಂಭದಲ್ಲಿ ಹೇಳುತ್ತಿದ್ದ "ನಮಸ್ಕಾರ್, ಮೈ ರವೀಶ್ ಕುಮಾರ್... " ಹೇಳಿ ಅವರು ವಿಡಿಯೋ ಕೊನೆಗೊಳಿಸದರು.

"ನೀವೆಲ್ಲರೂ ನನ್ನಲ್ಲಿದ್ದೀರಿ. ನಿಮ್ಮ ಪ್ರೀತಿಯೇ ನನ್ನ ಆಸ್ತಿ. ಇದು ನನ್ನ ಹೊಸ ವಿಳಾಸ, ಎಲ್ಲರೂ ಗೋದಿ ಮಾಧ್ಯಮದ  ಗುಲಾಮಗಿರಿಯ ವಿರುದ್ಧ ಹೋರಾಡಬೇಕು,'' ಎಂದು ಅವರು ಟ್ವಿಟರ್ ನಲ್ಲಿ ಹೇಳಿದ್ದಾರೆ.

ಬುಧವಾರ ರವೀಶ್ ಕುಮಾರ್ ಅವರ ರಾಜೀನಾಮೆ ಬೆನ್ನಲ್ಲೇ ಎನ್‍ಡಿಟಿವಿ ಕಳುಹಿಸಿದ್ದ ಆಂತರಿಕ ಇಮೇಲ್‍ನಲ್ಲಿ ಅವರ ರಾಜೀನಾಮೆ ತಕ್ಷಣ ಜಾರಿಗೆ ಬರುತ್ತದೆ ಎಂದು ಹೇಳಿತ್ತು. "ರವೀಶ್ ಅವರಂತೆ ಜನರ ಮೇಲೆ ಪರಿಣಾಮ ಬೀರಿದ ಕೆಲವೇ ಕೆಲವು ಪತ್ರಕರ್ತರಿದ್ದಾರೆ. ಜನಜಂಗುಳಿಯಲ್ಲಿ, ಎಲ್ಲೆಲ್ಲೂ ಇದು ಪ್ರತಿಫಲಿಸಿದೆ, ಅವರಿಗೆ ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊರೆತ ಮಾನ್ಯತೆ ಮತ್ತು ಪ್ರಶಸ್ತಿಗಳಲ್ಲಿ ಪ್ರತಿಬಿಂಬಿತವಾಗಿವೆ. ರವೀಶ್ ಅವರು ದಶಕಗಳ ಕಾಲ ಎನ್‍ಡಿಟಿವಿಯ ಅವಿಭಾಜ್ಯ ಅಂಗವಾಗಿದ್ದರು. ಅವರ ಕೊಡುಗೆ ಅಪಾರ ಹಾಗೂ ಅವರು ಮಾಡುವ ಹೊಸ ಆರಂಭದಲ್ಲೂ ಅವರು ಯಶಸ್ವಿಯಾಗಲಿದ್ದಾರೆ,'' ಎಂದು ಇಮೇಲ್‍ನಲ್ಲಿ ಹೇಳಲಾಗಿದೆ.

ರವೀಶ್ ಅವರು ಎನ್‍ಡಿಟಿವಿಯನ್ನು 19966 ರಲ್ಲಿ ಸೇರಿದ್ದರು ಹಾಗೂ ಅವರ ಹಮ್ ಲೋಗ್, ರವೀಶ್ ಕಿ ರಿಪೋರ್ಟ್, ದೇಸ್ ಕಿ ಬಾತ್ ಮತ್ತು ಪ್ರೈಮ್ ಟೈಮ್ ಕಾರ್ಯಕ್ರಮಗಳು ಜನಪ್ರಿಯವಾಗಿದ್ದವು. ಅವರು  ಎರಡು ಬಾರಿ ರಾಮನಾಥ್ ಗೋಯೆಂಕಾ ಎಕ್ಸಲೆನ್ಸ್ ಇನ್ ಜರ್ನಲಿಸಂ ಪ್ರಶಸ್ತಿಯ ಹೊರತಾಗಿ ಪ್ರತಿಷ್ಠಿತ ಮ್ಯಾಗ್ಸೇಸೆ ಪ್ರಶಸ್ತಿಯನ್ನು 2019 ರಲ್ಲಿ ಪಡೆದುಕೊಂಡಿದ್ದಾರೆ.

Full View

Similar News