ನ್ಯಾಯಾಂಗ ಅಧಿಕಾರಿಯ "ಅಶ್ಲೀಲ" ವೀಡಿಯೊವನ್ನು ಹಂಚಿಕೊಳ್ಳಲು, ಪೋಸ್ಟ್ ಮಾಡುವುದಕ್ಕೆ ದಿಲ್ಲಿ ಹೈಕೋರ್ಟ್ ನಿರ್ಬಂಧ

Update: 2022-12-01 08:16 GMT

ಹೊಸದಿಲ್ಲಿ: ನವೆಂಬರ್ 29ರಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದ್ದ ನ್ಯಾಯಾಂಗ ಅಧಿಕಾರಿ (Delhi Judicial Officer) ಹಾಗೂ ಮಹಿಳೆಯೋರ್ವರ "ಅಶ್ಲೀಲ" ವಿಡಿಯೊ ಹಂಚಿಕೆಗೆ ದೆಹಲಿ ಹೈಕೋರ್ಟ್ (Delhi High Court) ನಿರ್ಬಂಧ ವಿಧಿಸಿದೆ.

ತಮ್ಮ ಗುರುತನ್ನು ಗುಪ್ತವಾಗಿಡಬೇಕು ಎಂಬ ಸಂತ್ರಸ್ತರ ಮನವಿಯನ್ನು ಪುರಸ್ಕರಿಸಿದ ನ್ಯಾ. ಯಶವಂತ್ ವರ್ಮಾ, ಹಲವು ಕಾನೂನುಗಳ ಉಲ್ಲಂಘನೆಯ ಜೊತೆಗೆ ವಿಡಿಯೊದ ಹಂಚಿಕೆಯಿಂದ ದೂರುದಾರರ ಖಾಸಗಿತನಕ್ಕೆ ಸರಿಪಡಿಸಲಾಗದ ಹಾನಿಯಾಗುವುದರಿಂದ ಮಧ್ಯಂತರ ತಡೆಯಾಜ್ಞೆ ನೀಡುತ್ತಿರುವುದಾಗಿ ಹೇಳಿದ್ದಾರೆ.

ಹೈಕೋರ್ಟ್‍ನ ಸಂಪೂರ್ಣನ ನ್ಯಾಯಾಲಯವು ತನ್ನ ಆಡಳಿತಾತ್ಮಕ ವಿಭಾಗದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಡಿಯೊಗೆ ಎಲ್ಲ ಬಗೆಯ ಸಂದೇಶ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲದೆ ಅಂತರ್ಜಾಲ ಸೇವೆ ಪೂರೈಕೆದಾರರ ವೇದಿಕೆಗಳಲ್ಲೂ ನಿರ್ಬಂಧ ವಿಧಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಸೂಚಿಸುವಂತೆ ಪ್ರಧಾನ ರಿಜಿಸ್ಟ್ರಾರ್ ಅವರಿಗೆ ತಾಕೀತು ಮಾಡಿದೆ.

ವಿಡಿಯೋ ದೂರುದಾರರ ಖಾಸಗಿತನಕ್ಕೆ ಗಂಭೀರ ಮತ್ತು ಸರಿಪಡಿಸಲಾಗದ ಹಾನಿಯನ್ನುಂಟು ಮಾಡುವ ಸಾಧ್ಯತೆ ಇರುವುದರಿಂದ ಪ್ರತಿವಾದಿಗಳ ಗೈರುಹಾಜರಿಯ ನಡುವೆಯೂ ಮಧ್ಯಂತರ ತಡೆಯಾಜ್ಞೆ ನೀಡುತ್ತಿರುವುದಾಗಿ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

“ನ್ಯಾಯಾಲಯಕ್ಕೆ ದೂರನ್ನು ಆಧರಿಸಿ ವಿಡಿಯೊದ ತುಣುಕುಗಳನ್ನು ವೀಕ್ಷಿಸುವ ಅವಕಾಶ ದೊರೆಯಿತು. ಐಪಿಸಿ ಸೆಕ್ಷನ್ 354ಸಿ, 1860, ಹಾಗೆಯೇ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಕಾಯ್ದೆಯ ಸೆಕ್ಷನ್ 67ಎ ಅನ್ನು ನ್ಯಾಯಾಲಯ ಗಮನದಲ್ಲಿಟ್ಟುಕೊಂಡಿದ್ದು, ಅನುಮತಿ ಇಲ್ಲದೆ ಸದರಿ ವಿಡಿಯೊವನ್ನು ಹಂಚುವುದು ಈ ಕಾಯ್ದೆಗಳ ಉಲ್ಲಂಘನೆಯಾಗಿದ್ದು, ಇದು ಮೇಲ್ನೋಟದ ಅಪರಾಧವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಅಂತರ್ಜಾಲ ಸೇವೆ ಒದಗಿಸುವ 1ರಿಂದ 4ರವರೆಗೆ ಪ್ರತಿವಾದಿಯಾಗಿರುವವರಲ್ಲಿ (ಸಾಮಾಜಿಕ ಜಾಲತಾಣ ವೇದಿಕೆಗಳು) ಈ ವಿಡಿಯೊ ಹಂಚಿಕೆಯಾದರೆ, ಅವರೂ ಮೇಲ್ನೋಟದ ಅಪರಾಧಿಗಳಾಗಲಿದ್ದು, ಕಾನೂನಾತ್ಮಕವಾಗಿ ಅಳವಡಿಸಿಕೊಂಡಿರುವ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

ಪ್ರಧಾನ ರಿಜಿಸ್ಟ್ರಾರ್ ಸೂಚಿಸುವ ಎಲ್ಲ ಕ್ರಮಗಳನ್ನೂ ಕೈಗೊಂಡಿರುವ ಬಗ್ಗೆ ಖಾತ್ರಿ ಪಡಿಸಿ, ಈ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ವಿಸ್ತೃತ ವರದಿ ನೀಡುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ವಿಡಿಯೊದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯೊಬ್ಬರ ದೂರನ್ನು ಆಧರಿಸಿ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದ್ದು, ಅವರು ಮಾರ್ಚ್ 9, 2022ರ ದಿನಾಂಕ ಹೊಂದಿರುವ ಈ ‘ತಿರುಚಲಾದ ವಿಡಿಯೊ’ದ ಪ್ರಕಟಣೆ ಮತ್ತು ಪ್ರಸಾರವನ್ನು ಶಾಶ್ವತವಾಗಿ ನಿರ್ಬಂಧಿಸುವ ತಡೆಯಾಜ್ಞೆ ನೀಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

ದೂರುದಾರರನ್ನು ವಕೀಲರಾದ ಆಶಿಶ್ ದೀಕ್ಷಿತ್, ಅಮಿತ್ ಶರ್ಮಾ ಮತ್ತು ವಂದನಾ ಸಚ್‍ ದೇವ್ ಪ್ರತಿನಿಧಿಸಿದ್ದರು.

ದೂರಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಮತ್ತು ಸಾಮಾಜಿಕ ಜಾಲತಾಣಗಳಿಗೆ ನೋಟೀಸ್ ಜಾರಿ ಮಾಡಿರುವ ನ್ಯಾಯಾಲಯವು, ಮುಂದಿನ ಅರ್ಜಿ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ನಿಗದಿಪಡಿಸಿದೆ ಎಂದು ndtv.com ವರದಿ ಮಾಡಿದೆ. 

ಇದನ್ನೂ ಓದಿ: ಗೋದಿ ಮೀಡಿಯಾದ ವಿರುದ್ಧ ಜನರೇ ಹೋರಾಡುವುದು ಅನಿವಾರ್ಯ: NDTV ಬಿಟ್ಟ ರವೀಶ್ ಕುಮಾರ್ ಸಂದೇಶ

Similar News