ಪ್ರಧಾನಿ ಮೋದಿ ತಮಿಳುನಾಡು ಭೇಟಿ ವೇಳೆ ಭದ್ರತಾ ಲೋಪ ಉಂಟಾಗಿತ್ತೆಂಬ ಅಣ್ಣಾಮಲೈ ಆರೋಪ ನಿರಾಕರಿಸಿದ ಡಿಜಿಪಿ

Update: 2022-12-01 12:15 GMT

ಚೆನ್ನೈ: ಜುಲೈ ತಿಂಗಳಿನಲ್ಲಿ ಚೆಸ್ ಒಲಿಂಪಿಯಾಡ್ (Chess Olympiad) ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಆಗಮಿಸಿದ್ದಾಗ ಭದ್ರತಾ ಲೋಪ ಉಂಟಾಗಿತ್ತೆಂಬ ಆರೋಪಗಳನ್ನು ತಮಿಳುನಾಡು ಡಿಜಿಪಿ ಶೈಲೇಂದ್ರ ಬಾಬು  (Tamil Nadu DGP Sylendra Babu) ನಿರಾಕರಿಸಿದ್ದಾರೆ. ಈ ಆರೋಪವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ (K Annamalai) ಅವರು ಮಂಗಳವಾರ ಮಾಡಿದ್ದರಲ್ಲದೆ ರಾಜ್ಯಪಾಲ ಆರ್ ಎನ್ ರವಿ ಅವರಿಗೆ ಮನವಿಯನ್ನೂ ಸಲ್ಲಿಸಿ ಲೋಪಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ್ದರು ಎಂದು thenewsminute.com ವರದಿ ಮಾಡಿದೆ.

ಭದ್ರತಾ ಲೋಪ ಕುರಿತಂತೆ ರಾಜ್ಯ ಪೊಲೀಸ್ ಇಲಾಖೆಯು ಕೇಂದ್ರೀಯ ಏಜನ್ಸಿಗಳಿಂದ ಯಾವುದೇ ಸಂವಹನ ಪಡೆದಿಲ್ಲ ಎಂದು ಮದ್ರಾಸ್ ವಿವಿಯಲ್ಲಿ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಶೈಲೇಂದ್ರ ಬಾಬು ಹೇಳಿದರು.

"ಭದ್ರತೆಗೆ ಸಂಬಂಧಿಸಿದ ಎಲ್ಲಾ ಆಡಿಟ್‍ಗಳನ್ನು ತಮಿಳುನಾಡು ಪೊಲೀಸ್ ನಿಯಮಿತವಾಗಿ ನಡೆಸಿದೆ. ದೇಶದಲ್ಲಿಯೇ ಅತ್ಯುತ್ತಮ ಭದ್ರತಾ ಪರಿಕರಗಳು ತಮಿಳುನಾಡು ಪೊಲೀಸರ ಬಳಿ ಇದೆ, ಅಗತ್ಯವಿದ್ದಾಗ ಕೇರಳ ಸಹಿತ ಇತರ ರಾಜ್ಯಗಳಿಗೆ ಈ ಪರಿಕರಗಳನ್ನು ತಮಿಳುನಾಡು ಒದಗಿಸಿದೆ," ಎಂದು ಅವರು ಹೇಳಿದರು.

ಈ ನಡುವೆ ಅಣ್ಣಾಮಲೈ ಅವರು ಸಲ್ಲಿಸಿದ ಮನವಿಯನ್ನಾಧರಿಸಿ ರಾಜ್ಯಪಾಲರು ಆರೋಪಿತ ಭದ್ರತಾ ಲೋಪ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿ ವಿ ಇರೈ ಅನ್ಬು ಅವರಿಗೆ ಸೂಚಿಸಿದ್ದಾರೆ.

ಪ್ರಧಾನಿ ಭೇಟಿ ವೇಳೆ ಬಳಸಲಾದ ಮೆಟಲ್ ಡಿಟೆಕ್ಟರ್‍ಗಳು, ಬಾಂಬ್ ಡಿಟೆಕ್ಟರ್‍ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಅಣ್ಣಾಮಲೈ ಆರೋಪಿಸಿದ್ದರು.

ಆರೋಪ ಹೊರಿಸಿದ ಅಣ್ಣಾಮಲೈ ವಿರುದ್ಧ ಆಡಳಿತ ಡಿಎಂಕೆ ಕಿಡಿ ಕಾರಿದೆ. ಪ್ರಧಾನಿ ಭೇಟಿಗೆ ಮುನ್ನ ಎಸ್‍ಪಿಜಿ ಆಗಮಿಸಿದ ನಂತರ ಎಲ್ಲಾ ಭದ್ರತೆಯನ್ನು ಅವರೇ ನೋಡಿಕೊಳ್ಳುತ್ತಾರೆ ಎಂದು ಡಿಎಂಕೆ ವಕ್ತಾರ ಟಿ ಕೆ ಎಸ್ ಇಳಂಗೋವನ್ ಹೇಳಿದ್ದಾರೆ.

ಇದನ್ನೂ ಓದಿ: TRS ಶಾಸಕರ ಖರೀದಿ ಯತ್ನ ಪ್ರಕರಣ: ಸಂಚು ರೂಪಿಸುವ ಮುಖ್ಯ ಸಭೆ ಬಿ.ಎಲ್. ಸಂತೋಷ್ ನಿವಾಸದಲ್ಲಿ ನಡೆದಿತ್ತು ಎಂದ ಸಿಟ್

Similar News