ಯುವಜನರಿಂದ ಪ್ರಜಾಪ್ರಭುತ್ವದ ಮೌಲ್ಯ ಸಾಕಾರಗೊಳ್ಳಲು ಸಾಧ್ಯ: ದ.ಕ.ಜಿಪಂ ಸಿಇಒ ಡಾ.ಕುಮಾರ್

Update: 2022-12-01 16:41 GMT

ಮಂಗಳೂರು: ಯುವಜನತೆಯು ಬೆಲೆ ಕಟ್ಟಲಾಗದ ಸಂಪತ್ತಾಗಿದೆ. ನೈಸರ್ಗಿಕ ಸಂಪತ್ತಿನಷ್ಟೇ ಮಹತ್ವವಿರುವ ಆ ಸಂಪತ್ತಿನಿಂದ ಮಾತ್ರ ಪ್ರಜಾಪ್ರಭುತ್ವದ ಮೌಲ್ಯ ಯಶಸ್ವಿಯಾಗಿ ಸಾಕಾರಗೊಳಿಸಲು ಸಾಧ್ಯ ಎಂದು ದ.ಕ.ಜಿಪಂ ಸಿಇಒ ಡಾ. ಕುಮಾರ್ ಅಭಿಪ್ರಾಯಪಟ್ಟರು.

ದ.ಕ.ಜಿಪಂ, ಕಾಲೇಜು ಶಿಕ್ಷಣ ಇಲಾಖೆ ಹಾಗೂ ರಥಬೀದಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಗರದ ಬಲ್ಮಠ ಮಳಾ ಕಾಲೇಜಿನಲ್ಲಿ ಸ್ವೀಪ್ ಸಮಿತಿಯ ವತಿಯಿಂದ ಗುರುವಾರ ನಡೆದ  ಮತದಾರರ ಸಾಕ್ಷರತಾ ಸಂಘ ವಿಶೇಷ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕಿರುವ ಯುವ ಮತದಾರರು ತಮ್ಮ ಹೆಸರುಗಳನ್ನು ನೋಂದಾಯಿಸಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಮತ್ತು ಮತದಾನದ ಮಹತ್ವದ ಅರಿವಿಗಾಗಿ ಪ್ರತೀ ಕಾಲೇಜಿನಲ್ಲೂ ಮತದಾರರ ಸಾಕ್ಷರತಾ ಸಂಘ ಸ್ಥಾಪಿಸಲಾಗಿದೆ ಎಂದರು.

ಮತದಾನ ಮಾಡುವುದು ನಾಗರಿಕ ಜವಾಬ್ದಾರಿ ಮಾತ್ರವಲ್ಲ ಮೂಲಭೂತ ಹಕ್ಕು ಕೂಡ ಆಗಿದೆ. ಯುವ ಮತದಾರರನ್ನು ದೇಶದ ಸರ್ವೋಚ್ಚ ಶಕ್ತಿ ಎಂದು ಕರೆಯಲಾಗುತ್ತದೆ. ಅರ್ಹರೆಲ್ಲರೂ ಮತದಾನ ಮಾಡಬೇಕು. ಅದಕ್ಕಾಗಿ ಅವರ ಹೆಸರನ್ನು ಮತದಾರರ ಪಟ್ಟಿಗೆ ನೋಂದಾಯಿಸಿಕೊಳ್ಳಬೇಕು. ಪ್ರಸಕ್ತ ಜಿಲ್ಲೆಯಲ್ಲಿ 18-19ವರ್ಷದೊಳಗಿನ ಯುವ ಮತದಾರರ ಸಂಖ್ಯೆ ಕಡಿಮೆಯಿದೆ. ಕಾಲೇಜುಗಳಲ್ಲಿ ರಚಿಸಿರುವ ಇಲೆಕ್ಟ್ರೋ ಕ್ಲಬ್‌ನ ಮುಖ್ಯಸ್ಥರು ಈ ಕುರಿತು ಹೆಚ್ಚಿನ ಗಮನ ಹರಿಸಬೇಕು ಎಂದು ಡಾ.ಕುಮಾರ್ ಹೇಳಿದರು.

ಈ ಸಂದರ್ಭ ಮತದಾನ ಜಾಗೃತಿ ಕುರಿತ ಕರಪತ್ರ ಬಿಡುಗಡೆಗೊಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ ಬಾಳ ಮತದಾನದ ಪ್ರತಿಜ್ಞಾ ವಿಧಿಸ ಬೋಧಿಸಿ ಮಾತನಾಡಿದರು. ಜಿಪಂ ಸಹಾಯಕ ಕಾರ್ಯದರ್ಶಿ ಜೇಮ್ಸ್ ಕುಟ್ಹಿನಾ, ಉಪನ್ಯಾಸಕಿ ಹರಿಣಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

Similar News