ಮುಂಬೈ: ಮುನಿಸಿಪಲ್ ಕಾರ್ಪೊರೇಷನ್‍ ನ 5000 ಕೋಟಿ ರೂ. ಮೊತ್ತದ ವಹಿವಾಟು ದಾಖಲೆಗಳು ನಾಪತ್ತೆ!

Update: 2022-12-02 11:29 GMT

ಮುಂಬೈ: ಪಿಂಪ್ರಿ-ಚಿಂಚ್ ವಾಡ್ ಮುನಿಸಿಪಲ್ ಕಾರ್ಪೊರೇಷನ್‍ ನ ಹಲವಾರು ವಿಭಾಗಗಳಲ್ಲಿ ಕಳೆದ 40 ವರ್ಷಗಳಿಂದ ನಡೆದಿರುವ ವಹಿವಾಟು ದಾಖಲೆಗಳು ನಾಪತ್ತೆಯಾಗಿರುವ ಪ್ರಕರಣ ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಲೆಕ್ಕಪರಿಶೋಧನೆಯ ವರದಿಯನ್ನು ಸ್ಥಾಯಿ ಸಮಿತಿ ಮುಂದೆ ಮಂಡಿಸಿ, ಮುನಿಸಿಪಲ್ ಆಯುಕ್ತ ಶೇಖರ್ ಸಿಂಗ್ ಅವರಿಗೆ ಸಲ್ಲಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

“2014-15ರ ಲೆಕ್ಕಪರಿಶೋಧನೆ ಮಾಡುವಾಗ ರೂ. 4,917 ಕೋಟಿಗೆ ಸಂಬಂಧಿಸಿದ ವಹಿವಾಟು ದಾಖಲೆಗಳು ಇತರ ಹಲವಾರು ವಿಭಾಗಗಳಿಂದ ಲಭ್ಯವಾಗಲಿಲ್ಲ” ಎಂದು ಮುನಿಸಿಪಾಲಿಟಿಯ ಮುಖ್ಯ ಲೆಕ್ಕ ಪರಿಶೋಧಕ ಪ್ರಮೋದ್ ಭೋಸ್ಲೆ ತಿಳಿಸಿದ್ದಾರೆ ಎಂದು ‘indianexpress.com’ ವರದಿ ಮಾಡಿದೆ.

“ನಾವು ದಾಖಲೆಗಳು ನಾಪತ್ತೆಯಾಗಿವೆ ಎಂದು ಹೇಳಲು ಬಯಸುವುದಿಲ್ಲ. ಬದಲಿಗೆ 1982ರಲ್ಲಿ ಪಿಂಪ್ರಿ-ಚಿಂಚ್ ವಾಡ್ ಮುನಿಸಿಪಾಲಿಟಿ ಕಾರ್ಪೊರೇಷನ್ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಈ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಒದಗಿಸಿಲ್ಲ ಎಂದಷ್ಟೇ ಹೇಳಲು ಬಯಸುತ್ತೇವೆ. 30-40 ವರ್ಷಗಳ ಹಿಂದೆ ಲೆಕ್ಕಪರಿಶೋಧನೆ ನಡೆಸಿದ್ದ ಲೆಕ್ಕಪರಿಶೋಧಕರೊಬ್ಬರು ಕೆಲ ಮೊತ್ತದ ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿಲ್ಲ ಎಂದು ನಮೂದಿಸಿದ್ದಾರೆ. ಇದೇ ಬಗೆಯಲ್ಲಿ ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ಹಳೆಯ ದಾಖಲೆಗಳು ದೊರೆಯದಿರುವ ಬಗ್ಗೆ ನಂತರದ ಲೆಕ್ಕಪರಿಶೋಧಕರೂ ನಮೂದಿಸಿದ್ದಾರೆ. ಹೀಗೆ ನಿಲುಗಡೆಯಾಗಿರುವ ದಾಖಲೆಗಳ ಮೊತ್ತ ಇದೀಗ ರೂ. 4900 ಕೋಟಿಯನ್ನು ಸಮೀಪಿಸಿದೆ” ಎಂದು ಭೋಸ್ಲೆ ತಿಳಿಸಿದ್ದಾರೆ.

ಸಂಬಂಧಿಸಿದ ಇಲಾಖೆಗಳಿಗೆ ನೆನಪಿನೋಲೆಗಳನ್ನು ಕಳಿಸಿದರೂ ದಾಖಲೆಗಳನ್ನು ಒದಗಿಸಲಾಗಿಲ್ಲ ಎಂದು ಲೆಕ್ಕಪರಿಶೋಧನಾ ಅಧಿಕಾರಿಗಳು ತಿಳಿಸಿದ್ದಾರೆ. “ಪ್ರತಿ ಬಾರಿಯೂ ಲೆಕ್ಕಪರಿಶೋಧನಾ ಸಂಸ್ಥೆಯಿಂದ ಲೆಕ್ಕಪರಿಶೋಧನೆ ಮಾಡಿದಾಗಲೂ ಸಮರ್ಪಕ ದಾಖಲೆಗಳನ್ನು ಒದಗಿಸುವಂತೆ ಸ್ಥಳೀಯ ಸಂಸ್ಥೆಯ ವಿಭಾಗಗಳಿಗೆ ಸೂಚಿಸಲಾಗಿದೆ. ಹೀಗಿದ್ದೂ ಅವರು ಸಮರ್ಪಕ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ” ಎಂದು ಲೆಕ್ಕಪರಿಶೋಧಕರೊಬ್ಬರು ತಿಳಿಸಿದ್ದಾರೆ.

ಈ ನಡುವೆ, ಲೆಕ್ಕಪರಿಶೋಧನಾ ವರದಿಯು 1296 ಕೋಟಿ ಮೊತ್ತದ ವೆಚ್ಚದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಪೈಕಿ ರೂ. 119 ಕೋಟಿ ಮೊತ್ತವನ್ನು ವಸೂಲಿ ಮಾಡಬಹುದಾಗಿದೆ ಎಂದೂ ಹೇಳಿದೆ. “ವಸೂಲಿ ಮಾಡುವುದೆಂದರೆ, ಸ್ಥಳೀಯ ಸಂಸ್ಥೆಯ ಸಂಬಂಧಿತ ವಿಭಾಗಗಳು ವ್ಯಕ್ತಿ ಅಥವಾ ಗುತ್ತಿಗೆದಾರರಿಂದ ಈ ಮೊತ್ತವನ್ನು ವಸೂಲಿ ಮಾಡುವುದು. ಈ ಮೊತ್ತವನ್ನು ಯಾವುದೇ ಕಾರಣಕ್ಕೂ ಮನ್ನಾ ಮಾಡಲು ಸಾಧ‍್ಯವಿಲ್ಲ” ಎಂದು ಲೆಕ್ಕಪರಿಶೋಧಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ವಾರ್ಷಿಕ ಲೆಕ್ಕಪರಿಶೋಧನೆಯ ವರದಿಯಲ್ಲಿ ಸರಿಸುಮಾರು 44118 ಆಕ್ಷೇಪಗಳನ್ನು ನಮೂದಿಸಲಾಗಿದೆ.

ಈ ಕುರಿತು ಮಧ್ಯಪ್ರವೇಶಿಸಿದ್ದ ಹೋರಾಟಗಾರ ಮಾರುತಿ ಭಾಪ್ಕರ್ ಕಾರಣಕ್ಕೆ ಬಾಂಬೆ ಹೈಕೋರ್ಟ್, “ನಾಪತ್ತೆಯಾಗಿರುವ ದಾಖಲೆಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ” ಎಂದು ಹೇಳಿ, ಲೆಕ್ಕ ಪರಿಶೋಧನೆ ನಡೆಸದ ಸ್ಥಳೀಯ ಸಂಸ್ಥೆಗೆ ಛೀಮಾರಿ ಹಾಕಿತ್ತು.

“ಇದರರ್ಥ ಪಿಂಪ್ರಿ-ಚಿಂಚ್ ವಾಡ್ ಮುನಿಸಿಪಲ್ ಕಾರ್ಪೊರೇಷನ್ ಅಸ್ತಿತ್ವದಲ್ಲಿಲ್ಲದ ವಹಿವಾಟು ಅಥವಾ ವ್ಯವಹಾರಕ್ಕೆ ಹಣ ನೀಡಿದೆ ಎಂದು. ಇದು ಲೆಕ್ಕಪರಿಶೋಧನೆಯ ಗಂಭೀರ ಆಕ್ಷೇಪ. ಹಲವಾರು ವರ್ಷಗಳಿಂದ ಪಿಂಪ್ರಿ-ಚಿಂಚ್ ವಾಡ್ ಪಡಸಾಲೆಯಲ್ಲಿ ಕಾನೂನುಬಾಹಿರ ಕೆಲಸಗಳು ನಡೆದಿದ್ದು, ಕನಿಷ್ಠ ಪಕ್ಷ ಈಗಲಾದರೂ ಸ್ಥಳೀಯ ಸಂಸ್ಥೆಯ ಆಡಳಿತ ಎಚ್ಚೆತ್ತುಕೊಂಡು ಸಮರ್ಪಕ ಕ್ರಮ ಕೈಗೊಳ್ಳಬೇಕು” ಎಂದು ಮಾರುತಿ ಭಾಪ್ಕರ್ ಆಗ್ರಹಿಸಿದ್ದಾರೆ. 

Similar News