ವೈದ್ಯರು, ಆರೋಗ್ಯ ಸಿಬ್ಬಂದಿಗಳ ಮೇಲೆ ದಾಳಿ ನಡೆದರೆ 1 ಗಂಟೆಯೊಳಗೆ ಎಫ್‌ಐಆರ್‌ ದಾಖಲಿಸಬೇಕು: ಕೇರಳ ಹೈಕೋರ್ಟ್‌ ಸೂಚನೆ

Update: 2022-12-02 13:04 GMT

ಕೊಚ್ಚಿ: ವೈದ್ಯರು ಅಥವಾ ಆಸ್ಪತ್ರೆಗಳ ಯಾವುದೇ ಆರೋಗ್ಯ ಸೇವಾ ಸಿಬ್ಬಂದಿಗಳ ಮೇಲೆ ದಾಳಿ ನಡೆದಲ್ಲಿ  ಒಂದು ಗಂಟೆಯೊಳಗೆ ಎಫ್‌ಐಆರ್‌ (FIR) ದಾಖಲಿಸಬೇಕು ಹಾಗೂ ತಪ್ಪಿತಸ್ಥರನ್ನು ಬಂಧಿಸಲು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಕೇರಳ ಹೈಕೋರ್ಟ್‌ (Kerala HC) ಪೊಲೀಸರಿಗೆ ಸೂಚನೆ ನೀಡಿದೆ.

ನ್ಯಾಯಮೂರ್ತಿಗಳಾದ ದೇವನ್‌ ರಾಮಚಂದ್ರನ್‌ ಮತ್ತು ಕೌಸರ್‌ ಎಡಪ್ಪಗತ್‌ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ವೈದ್ಯರು ಮತ್ತು ಆರೋಗ್ಯ ಸೇವಾ ಸಿಬ್ಬಂದಿಗಳ ಮೇಲೆ ಇತ್ತೀಚೆಗೆ ನಡೆಯುತ್ತಿರುವ ಹಲವು ದಾಳಿಗಳ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟಿನ ಈ ಆದೇಶ ಮಹತ್ವ ಪಡೆದಿದೆ.

ಕಾನೂನು ಪ್ರಕ್ರಿಯೆ ವಿಳಂಬವಾಗಿದೆ ಹಾಗೂ ಸದ್ಯಕ್ಕೆ ತಮಗೆ ಸಮಸ್ಯೆಯಾಗದು ಎಂಬ ಅನಿಸಿಕೆಯಲ್ಲಿ ಇಂತಹ ಕೃತ್ಯವೆಸಗುವವರು ಇರುತ್ತಾರೆ ಎಂದು ನ್ಯಾಯಾಲಯ ಹೇಳಿದೆ.

ಜೂನ್‌ 2021 ರಿಂದ 12 ತಿಂಗಳುಗಳ ಅವಧಿಯಲ್ಲಿ ರಾಜ್ಯದಲ್ಲಿ ಆರೋಗ್ಯ ಸೇವಾ ಸಿಬ್ಬಂದಿಗಳು ಹಾಗೂ ಆಸ್ಪತ್ರೆಗಳ ಮೇಲೆ 138ಕ್ಕೂ ಅಧಿಕ ದಾಳಿಗಳು ನಡೆದಿವೆ ಎಂಬ ಮಾಹಿತಿ ಪಡೆದ ನಂತರ ಈ ಕುರಿತು ನ್ಯಾಯಾಲಯ ಹಸ್ತಕ್ಷೇಪ ನಡೆಸಿತ್ತು.

ಇದು ಅತ್ಯಂತ ಕಳವಳಕಾರಿ, ಇದರರ್ಥ ಪ್ರತಿ ತಿಂಗಳು 10 ರಿಂದ 12 ದಾಳಿಗಳು ನಡೆಯುತ್ತಿವೆ ಎಂದು ನ್ಯಾಯಾಲಯ ಹೇಳಿದೆ.

ಒಂದು ಗಂಟೆಯೊಳಗೆ ಎಫ್‌ಐಆರ್‌ ದಾಖಲಿಸಿ ತಪ್ಪಿತಸ್ಥರನ್ನು ಶೀಘ್ರ ಬಂಧಿಸುವ ಕುರಿತು ಪೊಲೀಸರಿಗೆ ಸೂಚನೆ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೇಳಿದ ನ್ಯಾಯಾಲಯ ಇನ್ನೂ ಯಾವುದೇ ಕ್ರಮಗಳನ್ನು ಕೈಗೊಳ್ಳಬಹುದೇ ಎಂಬ ಕುರಿತು ಸಲಹೆಗಳನ್ನು ಡಿಸೆಂಬರ್‌ 16ರೊಳಗೆ ನೀಡುವಂತೆ ಸೂಚಿಸಿದೆ.

ಇದನ್ನೂ ಓದಿ: ಮಹಿಳೆಯರಿಗಿಲ್ಲದ ಪ್ರತ್ಯೇಕ ಮತದಾನ ವ್ಯವಸ್ಥೆ: ಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರು

Similar News