ಅಕ್ರಮ ಹಣ ವರ್ಗಾವಣೆ ಆರೋಪ: ಛತ್ತೀಸ್‌ಗಡ ಮುಖ್ಯಮಂತ್ರಿಯ ಉಪಕಾರ್ಯದರ್ಶಿಯನ್ನು ಬಂಧಿಸಿದ ಈಡಿ

Update: 2022-12-02 14:11 GMT

ರಾಯ್ಪುರ್:‌ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದ ಉನ್ನತ ಅಧಿಕಾರಿಯೊಬ್ಬರನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ಬಂಧಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಬಂಧಿತ ಅಧಿಕಾರಿಯನ್ನು, ಮುಖ್ಯಮಂತ್ರಿ ಭೂಪೇಶ್ ಬಘೇಲ್ ಆಡಳಿತ ಉಪ ಕಾರ್ಯದರ್ಶಿಯಾಗಿರುವ ಸೌಮ್ಯ ಚೌರಾಸಿಯಾ ಎಂದು ಗುರುತಿಸಲಾಗಿದೆ.

ಸೌಮ್ಯಾ ಚೌರಾಸಿಯಾ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ. "ಛತ್ತೀಸ್‌ಗಢದಲ್ಲಿ ಸಾಗಿಸುವ ಪ್ರತಿ ಟನ್ ಕಲ್ಲಿದ್ದಲಿಗೂ ಪ್ರತಿ ಟನ್‌ಗೆ 25 ರೂಪಾಯಿಗಳಂತೆ ಅಕ್ರಮ ಸುಲಿಗೆ ಮಾಡಲಾಗುತ್ತಿದೆ" ಎಂಬ ಆರೋಪದ ಹಗರಣಕ್ಕೆ ಈ ಪ್ರಕರಣವು ಸಂಬಂಧಿಸಿದೆ.

ಈ ಪ್ರಕರಣದಲ್ಲಿ ಹಲವಾರು ದಾಳಿಗಳನ್ನು ನಡೆಸಿದ ನಂತರ ಇಡಿಯು ಅಕ್ಟೋಬರ್‌ನಲ್ಲಿ ರಾಜ್ಯದ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯ್ ಮತ್ತು ಇತರ ಇಬ್ಬರನ್ನು ಬಂಧಿಸಿತ್ತು.

ಬಾಘೆಲ್, ಕಳೆದ ವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಇಡಿ ಮೇಲೆ ವಾಗ್ದಾಳಿಯನ್ನು ಮಾಡಿದ್ದರು. ತನಿಖಾ ಸಂಸ್ಥೆ ತನ್ನ ಮಿತಿಗಳನ್ನು ದಾಟಿದೆ ಮತ್ತು ರಾಜ್ಯದ ಜನರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.

Similar News