ತಲೆಮರೆಸಿಕೊಂಡಿದ್ದ ಎಸ್ಪಿ ಶಾಸಕ ಇರ್ಫಾನ್ ಸೋಳಂಕಿ ಶರಣಾಗತಿ,ಬಂಧನ

Update: 2022-12-02 15:10 GMT

ಕಾನ್ಪುರ,ಡಿ.2: ತಲೆಮರೆಸಿಕೊಂಡಿದ್ದ ಎಸ್ಪಿ ಶಾಸಕ ಇರ್ಫಾನ್ ಸೋಳಂಕಿ ಮತ್ತು ಅವರ ಕಿರಿಯ ಸೋದರ ರಿಝ್ವಾನ್ ಸೋಳಂಕಿ ಶುಕ್ರವಾರ ಇಲ್ಲಿಯ ಕಮಿಷನರ್ ಕಚೇರಿಯಲ್ಲಿ ಪೊಲೀಸರಿಗೆ ಶರಣಾಗಿದ್ದು,ಅವರನ್ನು ಬಂಧಿಸಲಾಗಿದೆ.

ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ.8ರಂದು ಗಲಭೆ ಮತ್ತು ನಾಝಿರ್ ಫಾತಿಮಾ ಎನ್ನುವವರ ಮನೆಗೆ ಬೆಂಕಿ ಹಚ್ಚಿದ್ದ ಆರೋಪದಲ್ಲಿ ತಮ್ಮ ವಿರುದ್ಧ ಪ್ರಕರಣ ದಾಖಲಾದ ಬಳಿಕ ಸೋಳಂಕಿ ಸೋದರರು ತಲೆಮರೆಸಿಕೊಂಡಿದ್ದರು.

ವೀಡಿಯೊ ಸಂದೇಶವೊಂದರಲ್ಲಿ ತನ್ನ ವಿರುದ್ಧದ ಆರೋಪಗಳನ್ನು ತಿರಸ್ಕರಿಸಿದ್ದ ಇರ್ಫಾನ್ ಸೋಳಂಕಿ,ಆರೋಪಗಳ ಸೂಕ್ತ ತನಿಖೆಗಾಗಿ ಮತ್ತು ನ್ಯಾಯವನ್ನು ಖಚಿತಪಡಿಸಲು ಶಾಸಕರ ಸಮಿತಿಯನ್ನು ರಚಿಸುವಂತೆ ಉತ್ತರ ಪ್ರದೇಶ ವಿಧಾನಸಭೆಯ ಸ್ಪೀಕರ್ ಸತೀಶ ಮಹಾನಾ ಅವರನ್ನು ಕೋರಿಕೊಂಡಿದ್ದರು.

ಸೋಲಂಕಿ ಸೋದರರು ಪೊಲೀಸರಿಗೆ ಶರಣಾಗುವಾಗ ಅವರ ಕುಟುಂಬ ಸದಸ್ಯರು ಹಾಗೂ ಎಸ್ಪಿ ಶಾಸಕರಾದ ಅಮಿತಾಭ್ ಬಾಜಪೇಯಿ ಮತ್ತು ಮುಹಮ್ಮದ್ ಹಸನ್ ಅಲಿಯಾಸ್ ರೂಮಿ ಜೊತೆಯಲ್ಲಿದ್ದರು ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

15 ದಿನಗಳ ಹಿಂದೆಯೇ ಸೋಳಂಕಿ ಸೋದರರ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ಗಳನ್ನು ನಾವು ಪಡೆದುಕೊಂಡಿದ್ದೆವು ಎಂದು ಪೊಲೀಸರು ತಿಳಿಸಿದರು.

Similar News