ಮುಂಬೈ: 8ನೇ ತರಗತಿ ವಿದ್ಯಾರ್ಥಿಗಳಿಂದ ಸಹಪಾಠಿಯ ಅತ್ಯಾಚಾರ; ಪ್ರಕರಣ ದಾಖಲು

Update: 2022-12-02 15:39 GMT

ಮುಂಬೈ, ಡಿ. 2:  ಮುಂಬೈಯ ಮಾಟುಂಗಾ ಸರಕಾರಿ ಶಾಲೆಯ ತರಗತಿಯೊಳಗೆ ಇಬ್ಬರು ಬಾಲಕರು 13 ವರ್ಷದ ತಮ್ಮ ಸಹಪಾಠಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳು ನೃತ್ಯಾಭ್ಯಾಸಕ್ಕೆ ಹೊರಗೆ ಹೋದ ಸಂದರ್ಭ ಅಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅವರು ಪರಿಸ್ಥಿತಿಯ ಲಾಭ ಪಡೆದು ಈ ಕೃತ್ಯ ಎಸಗಿದ್ದಾರೆ. ಬಾಲಕಿ ಹಾಗೂ ಆರೋಪಿ ಬಾಲಕರು 8ನೇ ತರಗತಿಯ ವಿದ್ಯಾರ್ಥಿಗಳು ಎಂದು ಅವರು ತಿಳಿಸಿದ್ದಾರೆ.

ಘಟನೆಯಿಂದ ಬಾಲಕಿ ಆಘಾತಕ್ಕೊಳಗಾಗಿದ್ದಾಳೆ ಹಾಗೂ ಘಟನೆ ಕುರಿತು ತನ್ನ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾಳೆ. ಕೂಡಲೇ ಕುಟುಂಬದ ಸದಸ್ಯರು ಬಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ದೂರಿನ ಆಧಾರದಲ್ಲಿ ಬಾಲಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಡಿಎ (16 ವರ್ಷಕ್ಕಿಂತ ಕೆಳಗಿರುವ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ) ಹಾಗೂ ಪೋಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಾಲಕರನ್ನು ಬಾಲಾಪರಾಧ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಅವರನ್ನು ದಕ್ಷಿಣ ಮುಂಬೈಯ ಬಾಲಾಪರಾಧಿ ಬಂಧನ ಕೇಂದ್ರಕ್ಕೆ ಕಳುಹಿಸಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Similar News