ತೃತೀಯ ಲಿಂಗಿ ವಕೀಲರ ನೋಂದಣಿ ಶುಲ್ಕ ಮನ್ನಾ ಕೋರಿದ ಮನವಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಣೆ

Update: 2022-12-02 16:11 GMT

ಹೊಸದಿಲ್ಲಿ, ಡಿ. 2: ದಾಖಲಾತಿಗಾಗಿ ಶಾಸನಾತ್ಮಕ ವಕೀಲರ ಸಂಘಟನೆಗಳು ತೃತೀಯ ಲಿಂಗಿ ವಕೀಲರಿಗೆ ವಿಧಿಸಿದ ನೋಂದಣಿ ಶುಲ್ಕವನ್ನು ಮನ್ನಾ ಮಾಡುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಹಾಗೂ ನ್ಯಾಯಮೂರ್ತಿ ಪಿ.ಎಸ್. ನರಸಿಂಹಯ್ಯ ಅವರನ್ನು ಒಳಗೊಂಡ ಪೀಠ,  ನ್ಯಾಯಾಂಗ ಮರು ಪರಿಶೀಲನೆಯ ಮಾನದಂಡಗಳು ನೋಂದಣಿ ಶುಲ್ಕದ ಮನ್ನಾದಂತಹ ಆದೇಶಗಳನ್ನು ಜಾರಿ ಮಾಡಲು ಸಾಂವಿಧಾನಿಕ ನ್ಯಾಯಾಲಯಗಳಿಗೆ ಅವಕಾಶ ನೀಡುವುದಿಲ್ಲ ಎಂದಿದೆ.

ನೀವು ನೋಂದಣಿ ಶುಲ್ಕ ವಿಧಿಸಬಾರದು ಎಂದು ಹೇಳಲು ಸಾಧ್ಯವಿಲ್ಲ. ತೃತೀಯ ಲಿಂಗಿಗಳಿಗೆ ಮಾತ್ರ ಮನ್ನಾ ಯಾಕೆ ? ಈ ಮನ್ನಾವನ್ನು ಮಹಿಳೆಯರು, ಭಿನ್ನ ಸಾಮರ್ಥ್ಯರು ಹಾಗೂ ಅಂಚಿಗೆ ತಳ್ಳಲ್ಪಟ್ಟ ವ್ಯಕ್ತಿಗಳಿಗೆ ಯಾಕೆ ವಿಸ್ತರಿಸಬಾರದು?. ನ್ಯಾಯಾಂಗ ಮರು ಪರಿಶೀಲನೆಯ ಮಾನದಂಡಗಳನ್ನು ನೀವು ಅರ್ಥ ಮಾಡಿಕೊಳ್ಳಬೇಕು’’ ಎಂದು ಪೀಠ ಹೇಳಿದೆ.

ನೋಂದಣಿ ಶುಲ್ಕ ಮನ್ನಾ ಕಾನೂನು ವೃತ್ತಿಗೆ ಮಾತ್ರ ಯಾಕೆ ? ಇಂತಹ ಮನ್ನಾವನ್ನು ವೈದ್ಯಕೀಯ ಕ್ಷೇತ್ರಕ್ಕೆ ಕೂಡ ವಿಸ್ತರಿಸಬೇಕು ಎಂದು ಅದು  ಹೇಳಿದೆ ಹಾಗೂ ಅರ್ಜಿಯನ್ನು ತಿರಸ್ಕರಿಸಿದೆ. 

ಅನಂತರ ದೂರುದಾರ ಪರ ವಕೀಲ ಎಂ. ಕರ್ಪಗಂ ಅವರು ಮನವಿಯನ್ನು ಹಿಂದೆ ತೆಗೆದುಕೊಳ್ಳಲು ನಿರ್ಧರಿಸಿದರು. 

Similar News