ಹೆಜಮಾಡಿ: ಡಿ.5ರವರೆಗೆ ಹೆಚ್ಚುವರಿ ಟೋಲ್ ಶುಲ್ಕ ವಸೂಲಿ ಇಲ್ಲ

ಆಸುಪಾಸಿನ ಮೂರು ಟೋಲ್‌ಗಳಲ್ಲಿ ಶುಲ್ಕ ಹಂಚಿಹಾಕಲು ಡಿಸಿ, ಶಾಸಕರಿಂದ ಸಲಹೆ

Update: 2022-12-02 16:43 GMT

ಉಡುಪಿ, ಡಿ.2: ಈಗ ಶಾಶ್ವತವಾಗಿ ಮುಚ್ಚಿರುವ ಸುರತ್ಕಲ್ ಟೋಲ್ ಶುಲ್ಕವನ್ನು ಹೆಜಮಾಡಿ ಟೋಲ್ ನಲ್ಲಿ ಪಡೆಯುವುದನ್ನು ಡಿ.5ರವರೆಗೆ ತಡೆ ಹಿಡಿಯುವಂತೆ ಉಡುಪಿ ಶಾಸಕ ಕೆ.ರಘುಪತಿಭಟ್ ಅವರು  ಡಿ.1ರಂದು ಸಲಹೆ ನೀಡಿದ್ದಾರೆ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪಿಐಯುನ ಯೋಜನಾ ನಿರ್ದೇಶಕ ಹಾಗೂ ಡಿಜಿಎಂ ಎಚ್.ಎಸ್.ಲಿಂಗೇಗೌಡ ಅವರು ಪ್ರಾಧಿಕಾರದ ಬೆಂಗಳೂರಿನ ಪ್ರಾದೇಶಿಕ ಅಧಿಕಾರಿಗೆ ಪತ್ರವೊಂದನ್ನು ಬರೆದಿದ್ದಾರೆ.

ಡಿ.5ರಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಉಡುಪಿ ಜಿಲ್ಲೆಯ ಸಚಿವರು ಹಾಗೂ ಶಾಸಕರು ಭೇಟಿಯಾಗಿ ಚರ್ಚಿಸುವವರಿದ್ದಾರೆ ಎಂದು ಶಾಸಕ ರಘುಪತಿ ಭಟ್ ದೂರವಾಣಿ ಸಂಭಾಷಣೆಯ ವೇಳೆ ತಿಳಿಸಿದ್ದಾರೆ. ಇದಕ್ಕೆ ಮುನ್ನ ಡಿ.3ರಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರ ಹಾಗೂ ಜನಪ್ರತಿನಿಧಿಗಳ ಸಭೆಯೊಂದನ್ನು ಜಿಲ್ಲಾಡಳಿತದ ವತಿಯಿಂದ ಕರೆಯಲಾಗಿದೆ ಎಂದೂ ಅವರು ತಿಳಿಸಿದ್ದಾರೆ ಎಂದು ಲಿಂಗೇಗೌಡ ವಿವರಿಸಿದ್ದಾರೆ.

ಇದರೊಂದಿಗೆ ಸುರತ್ಕಲ್ ಟೋಲ್‌ನ ಶುಲ್ಕವನ್ನು ಹೆಜಮಾಡಿ ಶುಲ್ಕದೊಂದಿಗೆ ವಿಲೀನಗೊಳಿಸಿದರೆ, ಜಿಲ್ಲೆಯ ಸಚಿವರು ಹಾಗೂ ಶಾಸಕರು ಪ್ರತಿಭಟನೆ ಹಾಗು ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸಲಿದ್ದಾರೆ. ಹೆಜಮಾಡಿ ಟೋಲ್ ಫ್ಲಾಝಾವನ್ನು ಮುಚ್ಚಿಸುವುದಕ್ಕೂ ಮುಂದಾಗುತ್ತಾರೆ. ಅಲ್ಲದೇ ಹೆಜಮಾಡಿ ಟೋಲ್‌ಗೆ ಪೊಲೀಸರ ಭದ್ರತೆಯನ್ನು ನೀಡದಂತೆ ಹಾಗೂ ಹೆಜಮಾಡಿ ಟೋಲ್ ಸಂಗ್ರಹವನ್ನೇ ನಿಲ್ಲಿಸುತ್ತಾರೆ ಎಂದು ದೂರವಾಣಿ ಸಂಭಾಷಣೆಯ ವೇಳೆ ತಿಳಿಸಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ.

ಶುಲ್ಕ ಹಂಚಿಹಾಕುವ ಸಲಹೆ: ಇದರೊಂದಿಗೆ ಸುರತ್ಕಲ್ ಟೋಲ್ ಶುಲ್ಕವನ್ನು ಆಸುಪಾಸಿನ ಮೂರು ಟೋಲ್‌ಗಳ (ಬ್ರಹ್ಮರಕೊಚ್ಲು, ತಲಪಾಡಿ ಹಾಗೂ ಹೆಜಮಾಡಿ) ಶುಲ್ಕದೊಂದಿಗೆ ಸಮಾನವಾಗಿ ಹಂಚಿಹಾಕುವಂತೆ ಶಾಸಕರು ಸಲಹೆ ನೀಡಿದ್ದಾರೆ. ಇದರಿಂದ ಹೆಜಮಾಡಿಯ ಒಂದೇ ಟೋಲ್‌ನಲ್ಲಿ ಸಂಪೂರ್ಣ ಶುಲ್ಕ ವಿಧಿಸುವ ಸಮಸ್ಯೆ ತಪ್ಪುತ್ತದೆ. ಇಲ್ಲದಿದ್ದರೆ ಹೆಜಮಾಡಿ ಟೋಲ್ ಫ್ಲಾಝಾದ ಎದುರು ಸಾರ್ವಜನಿಕ ಪ್ರತಿಭಟನೆ ನಡೆಯಲಿದ್ದು, ಜನತೆಗೆ ಉತ್ತರಿಸಲು ನಮಗೆ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ ಎಂದರು.

ಉಡುಪಿ ಜಿಲ್ಲಾಧಿಕಾರಿಯವರು ಸಹ ಸುರತ್ಕಲ್ ಫ್ಲಾಝಾದ ಶುಲ್ಕವನ್ನು ಮೂರು ಟೋಲ್ ಫ್ಲಾಝಾಗಳಲ್ಲಿ ಸಮಾನವಾಗಿ ಹಂಚಿಹಾಕಲು ಪ್ರಸ್ತಾಪವನ್ನು  ನಮಗೆ ನೀಡಿದ್ದಾರೆ. ಇದರೊಂದಿಗೆ ಹೆಜಮಾಡಿ ಟೋಲ್‌ನಲ್ಲಿ ಸಂಗ್ರಹಿಸಬೇಕಾದ ಶುಲ್ಕದ ವಿಧಾನಗಳ ಬಗ್ಗೆ ಚರ್ಚಿಸಲು ಡಿ.3ರಂದು ಜನಪ್ರತಿನಿಧಿಗಳ ಸಭೆ ಕರೆದಿರುವುದಾಗಿಯೂ ಅವರು ತಿಳಿಸಿದ್ದಾರೆ ಎಂದು ಲಿಂಗೇಗೌಡರು ಪ್ರಾದೇಶಿಕ ಅಧಿಕಾರಿ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

Similar News