ಜಾನುವಾರುಗಳಿಗೆ ವಂದೇ ಭಾರತ್ ರೈಲು ಢಿಕ್ಕಿ; ಎರಡು ತಿಂಗಳುಗಳಲ್ಲಿ ಅವಘಡದ ನಾಲ್ಕನೇ ಘಟನೆ

Update: 2022-12-02 16:55 GMT

ಮುಂಬೈ,ಡಿ.2: ವಂದೇ ಭಾರತ್ ಸೂಪರ್‌ಫಾಸ್ಟ್ ರೈಲು, ಜಾನುವಾರುಗಳಿಗೆ ಢಿಕ್ಕಿ ಹೊಡೆದ ಸರಣಿ ಘಟನೆಗಳು ವರದಿಯಾಗಿರುವಂತೆಯೇ, ಗುರುವಾರ ಸಂಜೆಯ  ಅಂತಹದೇ  ಅವಘಡವು ಮರುಕಳಿಸಿದೆ. ಗಾಂಧಿನಗರ-ಮುಂಬೈ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಗುಜರಾತ್‌ನ ಉಡ್ವಾಡ ಹಾಗೂ ವಾಪಿ ರೈಲು ನಿಲ್ದಾಣಗಳ ನಡುವೆ ದನಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಅವಘಡದಿಂದಾಗಿ ರೈಲಿನ ಮುಂಭಾಗದ ಫಲಕಕ್ಕೆ ಸಣ್ಣಪುಟ್ಟ ಹಾನಿಯಾಗಿರುವುದಾಗಿ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಉಡ್ವಾಡ  ಹಾಗೂ ವಾಪಿ ರೈಲು ನಿಲ್ದಾಣಗಳ ನಡುವೆ ಇರುವ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 87ರ ಸಮೀಪ ಈ ಘಟನೆ ಸಂಭವಿಸಿದೆಯೆಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಮಿತ್ ಠಾಕೂರ್ ತಿಳಿಸಿದ್ದಾರೆ.

ರೈಲಿನ ಮುಂಭಾಗಕ್ಕಾದ ಹಾನಿಯಿಂದಾಗಿ ಅದರ ಕಾರ್ಯನಿರ್ವಹಣೆಗೆ ಯಾವುದೇ ಸಮಸ್ಯೆಯಾಗಿಲ್ಲವೆಂದವರು ಹೇಳಿದ್ದಾರೆ. ಅವಘಡದ ಬಳಿಕ ತುಸು ಹೊತ್ತು ಸ್ಥಳದಲ್ಲಿ ರೈಲನ್ನು ನಿಲ್ಲಿಸಲಾಗಿತ್ತು. ಆನಂತರ ಸಂಜೆ 6.35ರ ವೇಳೆಗೆ ಅದು ಪ್ರಯಾಣವನ್ನು ಪುನಾರಂಭಿಸಿತೆಂದು ಸುಮಿತ್ ಠಾಕೂರ್ ತಿಳಿಸಿದ್ದಾರೆ.

ಸೆಮಿ ಹೈಸ್ಪೀಡ್ ರೈಲು ಆಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಎರಡು ತಿಂಗಳ ಹಿಂದೆ ಕಾರ್ಯಾರಂಭಿಸಿದ ಬಳಿಕ  ದಾರಿ ಮಧ್ಯೆ  ಅವಘಡ ಸಂಭವಿಸಿದ ನಾಲ್ಕನೆ ಘಟನೆ ಇದಾಗಿದೆ.

ಆಕ್ಟೋಬರ್ 6ರಂದು  ಗುಜರಾತ್‌ನ ವಾಟ್ವಾ ರೈಲು ನಿಲ್ದಾಣದ ಸಮೀಪ ರೈಲು ಹಳಿಯಲ್ಲಿ  ವಂದೇ ಭಾರತ್  ಹೈಸ್ಪೀಡ್ ರೈಲು ಜಾನುವಾರುಗಳಿಗೆ  ಢಿಕ್ಕಿ ಹೊಡೆದಿದ್ದರಿಂದ ರೈಲಿಗೆ  ಹಾನಿಯಾಗಿತ್ತು.

ಮಾರನೆ ದಿನವೇ, ಅಕ್ಚೋಬರ್ 7ರಂದು ಕಂಜಾರಿ ಹಾಗೂ ಆನಂದ್ ರೈಲು ನಿಲ್ದಾಣದ ನಡುವೆ, ದನಕ್ಕೆ ಡಿಕ್ಕಿ ಹೊಡೆದಿದ್ದರಿಂದ  ರೈಲಿನ ಮೂತಿಯ ಫಲಕ ಜಖಂಗೊಂಡಿತ್ತು. ಅದೇ ತಿಂಗಳಲ್ಲಿ, ಗುಜರಾತ್‌ನ ವಲ್ಸಾಡ್ ಸಮೀಪದ ಅತುಲ್ ನಿಲ್ದಾಣದಲ್ಲಿ ವಂದೇ ಭಾರತ್ ರೈಲು, ದನಕ್ಕೆ ಢಿಕ್ಕಿ ಹೊಡೆದಿತ್ತು.

Similar News