ಸುಕೇಶ್ ಚಂದ್ರಶೇಖರ್ ವಿರುದ್ಧದ ಕಪ್ಪುಹಣ ಬಿಳುಪು ಪ್ರಕರಣ: ಈ.ಡಿ.ಯಿಂದ ನಟಿ ನೋರಾ ಫತೇಹಿ ವಿಚಾರಣೆ

Update: 2022-12-02 17:16 GMT

ಹೊಸದಿಲ್ಲಿ,ಡಿ.2:  ವಂಚನೆಯ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್  ಹಾಗೂ ಆತನ ಸಹವರ್ತಿಗಳು  ಶಾಮೀಲಾಗಿದ್ದಾರೆನ್ನಲಾದ ಕಪ್ಪುಹಣ ಬಿಳುಪು ಪ್ರಕರಣದ ತನಿಖೆಗೆ ಸಂಬಂಧಿಸಿ ಖ್ಯಾತ ಬಾಲಿವುಡ್ ನಟಿ ನೂರಾ ಫತೇಹಿ ಶುಕ್ರವಾರ ಜಾರಿ ನಿರ್ದೇಶನಾಲಯದ ತಚೇರಿಗೆ ಹಾಜರಾಗಿ ಹೇಳಿಕೆಯನ್ನು ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ 30 ವರ್ಷ ವಯಸ್ಸಿನ ಫತೇಹಿಯವರನ್ನು ಈ ಹಿಂದೆಯೂ ಹಲವಾರು ಸಲ ಈ.ಡಿ.ಪ್ರಶ್ನಿಸಿತ್ತು.  ಕೆನಡಾ ಸಂಜಾತ ಫತೇಹಿ ಅವರು  ಏಳು ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದು, ಬಾಲಿವುಡ್ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಸುಕೇಶ್ ಚಂದ್ರಶೇಖರ್‌ಗೆ ಸಂಬಂಧಿಸಿ ಕೆಲವು ವಿಷಯಗಳಿಗೆ ಸಂಬಂಧಿಸಿದ ನೂರಾ ಫತೇಹಿ ಅವರನ್ನು  ಈ.ಡಿ. ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ. ಕಪ್ಪುಹಣ ಬಿಳುಪು ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಬೆಳಕಿಗೆ ಬಂದಿರುವ ಹೊಸ ವಿಚಾರಗಳ ಬಗ್ಗೆ ಆಕೆಯನ್ನು ಪ್ರಶ್ನಿಸಲಾಗುತ್ತಿದೆಯೆಂದು ತಿಳಿದುಬಂದಿದೆ.

ಸುಕೇಶ್ ಚಂದ್ರಸೇಖರ್  ಮುಖ್ಯ ಆರೋಪಿಯಾಗಿರುವ ಕಪ್ಪುಹಣ ಬಿಳುಪು ಪ್ರಕರಣದ ಕುರಿತಾಗಿ ಜಾರಿ ನಿರ್ದೇಶನಾಲಯವು ಈ ಹಿಂದೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ  ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್‌ರನ್ನು ಆರೋಪಿಯಾಗಿ ಹೆಸರಿಸಲಾಗಿದೆ.

ಜಾಕ್ವೆಲಿನ್ ಫೆರ್ನಾಂಡಿಸ್ ಅವರು ಈ.ಡಿ.ಗೆ ನೀಡಿದ ಹೇಳಿಕೆಯಲ್ಲಿ, ಚಂದ್ರಶೇಖರ್‌ನ ಪತ್ನಿ ಲೀನಾ ಮಾರಿಯಾ ಪಾಲ್ (ಲೀನಾ ಪೌಲೋಸ್) ತನ್ನನ್ನು 2020ರ ಡಿಸೆಂಬರ್‌ನಲ್ಲಿ ಚೆನ್ನೈನ ಪಂಚತಾರಾ ಹೊಟೇಲ್‌ನಲ್ಲಿ  ಆಯೋಜಿಸಲಾದ ಸಮಾಜಸೇವಾ ಕಾರ್ಯಕ್ರಮವೊಂದರಲ್ಲಿ  ಭಾಗವಹಿಸುವಂತೆ ಆಹ್ವಾನಿಸಿದ್ದರು.ತನಗೆ ನೂತನ ಐಫೋನ್, ಗುಕ್ಸಿ ಬ್ಯಾಗ್ ಹಾಗೂ ಬಿಎಂಡಬ್ಲ್ಯು ಕಾರನ್ನು ಆಕೆ ಉಡುಗೊರೆಆಗಿ ನೀಡಿದ್ದರು ಎಂದು ಹೇಳಿದ್ದರು.

Similar News