ವಿಝಿಂಜಂ ಬಂದರು ನಿರ್ಮಾಣಕ್ಕೆ ಕೇಂದ್ರ ಪಡೆಯ ಭದ್ರತೆಕೋರಿ ಕೇರಳ ಹೈಕೋರ್ಟ್‌ ಮೊರೆ ಹೋದ ಅದಾನಿ ಸಮೂಹ

Update: 2022-12-02 17:16 GMT

ತಿರುವನಂತಪುರಂ: ನಿರಂತರ ಪ್ರತಿಭಟನೆಗಳಿಗೆ ಸಾಕ್ಷಿಯಾದ ವಿಝಿಂಜಂ ಬಂದರಿನ ನಿರ್ಮಾಣಕ್ಕೆ ಭದ್ರತೆಯನ್ನು ನೀಡಲು ಕೇಂದ್ರ ಪಡೆಗಳನ್ನು ನಿಯೋಜಿಸುವಂತೆ ಕೋರಿ ಅದಾನಿ ಗ್ರೂಪ್ ಕೇರಳ ಹೈಕೋರ್ಟ್‌ಗೆ ಮೊರೆ ಹೋಗಿದೆ ಎಂದು Livelaw ವರದಿ ಮಾಡಿದೆ.

ಪ್ರತಿಭಟನೆಯ ಕಾರಣದಿಂದ ಅಡೆತಡೆಗಳು ಮತ್ತು ದಿಗ್ಬಂಧನಗಳ ವಿರುದ್ಧ ಅದಾನಿ ಸಮೂಹ ಮಾಡಿದ ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಅನು ಶಿವರಾಮನ್, ಕೇಂದ್ರ ಪಡೆಗಳನ್ನು ನಿಯೋಜಿಸುವ ಸಾಧ್ಯತೆಯ ಬಗ್ಗೆ ಚರ್ಚಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಕೇಳಿದ್ದಾರೆ. ಡಿಸೆಂಬರ್ 7ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ.

 ವಿಝಿಂಜಂ ಬಂದರಿನಲ್ಲಿ ಗೌತಮ್ ಅದಾನಿ ಅವರ 7,500 ಕೋಟಿ ರೂಪಾಯಿಗಳ ಯೋಜನೆಯನ್ನು ವಿರೋಧಿಸಿ ತಿರುವನಂತಪುರದ ಲ್ಯಾಟಿನ್ ಕ್ಯಾಥೋಲಿಕ್ ಡಯಾಸಿಸ್ ಆಶ್ರಯದಲ್ಲಿ ಸ್ಥಳೀಯ ಮೀನುಗಾರರು ಕಳೆದ ಕೆಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಯೋಜನೆಯಿಂದ ಕರಾವಳಿ ತೀರದ ಸವಕಳಿ ಉಂಟಾಗಿ ತಮ್ಮ ಜೀವನೋಪಾಯಕ್ಕೆ ಧಕ್ಕೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಯೋಜನಾ ಸ್ಥಳದಲ್ಲಿ ನಿರ್ಮಾಣವನ್ನು ಪುನರಾರಂಭಿಸದಂತೆ ಅದಾನಿ ಗ್ರೂಪ್ ಅನ್ನು ಪ್ರತಿಭಟನಾಕಾರರು ತಡೆದ ನಂತರ ಶನಿವಾರ ಪ್ರತಿಭಟನೆ ಹಿಂಸಾತ್ಮಕ ತಿರುವು ಪಡೆದುಕೊಂಡಿದೆ. ಕೇರಳ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಬಂದರಿನ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಲಾಗಿತ್ತು.

ಶನಿವಾರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತಿರುವನಂತಪುರಂ ಆರ್ಚ್‌ಬಿಷಪ್ ಥಾಮಸ್ ನೆಟ್ಟೊ, ಆಕ್ಸಿಲಿಯರಿ ಬಿಷಪ್ ಆರ್ ಕ್ರಿಸ್ಟುದಾಸ್ ಮತ್ತು ಇತರ 13 ಲ್ಯಾಟಿನ್ ಕ್ಯಾಥೋಲಿಕ್ ಪಾದ್ರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

Similar News