ತೂಕ ಮಾಪನವನ್ನು ರೈಲ್ವೆ ಹಳಿಗೆ ಎಸೆದ ಪೊಲೀಸರು: ಹೆಕ್ಕಲು ಹೋಗಿ ರೈಲು ಢಿಕ್ಕಿಯಾಗಿ ಕಾಲು ಕಳೆದುಕೊಂಡ ವ್ಯಾಪಾರಿ

Update: 2022-12-03 07:04 GMT

ಲಕ್ನೋ : ಉತ್ತರ ಪ್ರದೇಶದ ಕಾನ್ಪುರ್ ನ (Kanpur) ರೈಲ್ವೆ ನಿಲ್ದಾಣದ ಸಮೀಪದ ಹಳಿಯಲ್ಲಿ ಪೊಲೀಸರು ಎಸೆದ ತನ್ನ ತೂಕ ಮಾಪನವನ್ನು ಹೆಕ್ಕಲು ರೈಲು ಹಳಿ ಬಳಿ ಹೋದ 18 ವರ್ಷದ ತರಕಾರಿ ಮಾರಾಟಗಾರನೊಬ್ಬನಿಗೆ (Vendor) ರೈಲು ಢಿಕ್ಕಿ ಹೊಡೆದ ಪರಿಣಾಮ ಆತ ತನ್ನೆರಡೂ ಕಾಲುಗಳನ್ನು ಕಳೆದುಕೊಂಡ ಹೃದಯವಿದ್ರಾವಕ ಘಟನೆ ಶುಕ್ರವಾರ ನಡೆದಿದೆ ಎಂದು ndtv.com ವರದಿ ಮಾಡಿದೆ.

ಕಾನ್ಪುರ್ ರೈಲ್ವೆ ನಿಲ್ದಾಣದ ಸಮೀಪ ಪೊಲೀಸರು ಹೆಚ್ಚಾಗಿ ತರಕಾರಿ ಮಾರಾಟಗಾರರು ಒತ್ತುವರಿ ಮಾಡಿದ ಸ್ಥಳವನ್ನು ತೆರವುಗೊಳಿಸುವ ವೇಳೆ ಈ ಘಟನೆ ನಡೆದಿದೆ.

ಅರ್ಸಲನ್ ಎಂಬ ಯುವಕ ಜಿ ಟಿ ರೋಡ್ ಸಮೀಪ ತರಕಾರಿ ಮಾರಾಟ ಮಾಡುತ್ತಿದ್ದಾಗ ಇಬ್ಬರು ಪೊಲೀಸರು ಆತನ ಬಳಿ ಬಂದು ಆತನಿಗೆ ಥಳಿಸಿದ್ದರೆ, ನಂತರ ಹೆಡ್ ಕಾನ್‍ಸ್ಟೇಬಲ್ ರಾಕೇಶ್ ಎಂಬವರು ಆತನ ತೂಕ ಮಾಪನವನ್ನು ಹಳಿಗೆ ಎಸೆದಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಆರೋಪಿಸಿದ್ದಾರೆ.

ಅದನ್ನು ಹೆಕ್ಕಲು ಹಳಿಯತ್ತ ಓಡಿದ ಅರ್ಸಲನ್‍ಗೆ ರೈಲೊಂದು ಢಿಕ್ಕಿ ಹೊಡೆದಿತ್ತು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಜರ್ಝರಿತ ಕಾಲುಗಳಿಂದ ತೀವ್ರ ನೋವಿನಿಂದ ಆತ ಸಹಾಯಕ್ಕಾಗಿ ಅಂಗಲಾಚುತ್ತಿರುವುದು ಹಾಗೂ ಪೊಲೀಸರು ಆತನನ್ನು ಎತ್ತಿಕೊಂಡು ಹೋಗುತ್ತಿರುವುದು ಕಾಣಿಸುತ್ತದೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಕಾನ್ಪುರ್ ನ ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಧುಲ್ಲ್,  ಬೇಜವಾಬ್ದಾರಿಯಿಂದ ವರ್ತಿಸಿದ ಕಾನ್‍ಸ್ಟೇಬಲ್ ರಾಕೇಶ್ ಆವರನ್ನು ತಕ್ಷಣ ಅಮಾನತುಗೊಳಿಸಲಾಗಿದೆ. ಘಟನೆಯ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Similar News