ಮುಂಬೈನಲ್ಲಿ ಜ.14ರಿಂದ ಸಂಚರಿಸಲಿವೆ ಡಬಲ್ ಡೆಕರ್ ಇಲೆಕ್ಟ್ರಿಕ್ ಬಸ್‌ಗಳು

Update: 2022-12-03 16:01 GMT

ಮುಂಬೈ,ಡಿ.3: ಬೃಹನ್ಮುಂಬೈ ವಿದ್ಯುತ್ ಪೂರೈಕೆ ಮತ್ತು ಸಾರಿಗೆ (best)ಯು ಈ ತಿಂಗಳಲ್ಲಿ ತನ್ನ ಇಲೆಕ್ಟ್ರಿಕ್ ಬಸ್ ಸೇವೆಯನ್ನು ಆರಂಭಿಸಲಿದೆ ಮತ್ತು 2023,ಜ.14ರಿಂದ ಡಬಲ್ ಡೆಕರ್ ಇಲೆಕ್ಟ್ರಿಕ್ ಬಸ್‌ಗಳು ರಸ್ತೆಗಿಳಿಯಲಿವೆ.

ಡಬಲ್ ಡೆಕರ್ ಇ-ಬಸ್‌ಗಳಿಗೆ ಅನುಮೋದನೆಯು ಅಂತಿಮ ಹಂತದಲ್ಲಿದ್ದು,ಶೀಘ್ರವೇ ಲಭಿಸಲಿದೆ ಎಂದು ಬೆಸ್ಟ್‌ನ ಮಹಾ ಪ್ರಬಂಧಕ ಲೋಕೇಶ್ ಚಂದ್ರ (Lokesh Chandra)ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಜ.14ರಂದು ಕನಿಷ್ಠ 10 ಡಬಲ್ ಡೆಕರ್ ಇ-ಬಸ್‌ಗಳು ರಸ್ತೆಗಿಳಿಯಲಿವೆ ಮತ್ತು ಮೊದಲ ಹಂತದಲ್ಲಿ ಕ್ರಮೇಣ 50 ಬಸ್‌ಗಳಿಗೆ ಹೆಚ್ಚಿಸಲಾಗುವುದು. ಈ ತಿಂಗಳ ಉತ್ತರಾರ್ಧದಲ್ಲಿ ಸಿಂಗಲ್ ಡೆಕರ್ ಇ-ಬಸ್ ಸೇವೆ ಆರಂಭಗೊಳ್ಳುತ್ತಿದ್ದು, ಪ್ರಯಾಣಿಕರು ಆ್ಯಪ್ ಮೂಲಕ ತಮ್ಮ ಸೀಟ್‌ಗಳನ್ನು ಕಾಯ್ದಿರಿಸಬಹುದು ಎಂದರು.

ಮುಂದಿನ ವರ್ಷದ ಜೂನ್‌ನಲ್ಲಿ 500 ಇಲೆಕ್ಟ್ರಿಕ್ ವಾಹನಗಳೊಂದಿಗೆ ಟ್ಯಾಕ್ಸಿ ಸೇವೆಯನ್ನೂ ಆರಂಭಿಸಲು ಬೆಸ್ಟ್ ಉದ್ದೇಶಿಸಿದ್ದು,ಇದಕ್ಕಾಗಿ ಈಗಾಗಲೇ ಟೆಂಡರ್‌ಗಳನ್ನು ಕರೆಯಲಾಗಿದೆ. ಜನರು ‘ಚಲೋ ಆ್ಯಪ್’ ಮೂಲಕ ಈ ಕ್ಯಾಬ್‌ಗಳನ್ನು ಬುಕ್ ಮಾಡಬಹುದು ಎಂದು ಅವರು ತಿಳಿಸಿದರು.

ಮುಂಬೈ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಬಸ್ ಸೇವೆಯನ್ನು ಒದಗಿಸುತ್ತಿರುವ ಬೆಸ್ಟ್,400ಕ್ಕೂ ಅಧಿಕ ಇ-ಬಸ್‌ಗಳು ಸೇರಿದಂತೆ ಸುಮಾರು 3,500 ಬಸ್‌ಗಳನ್ನು ಹೊಂದಿದೆ.

 ಬೆಸ್ಟ್ 45 ನಾನ್-ಎಸಿ ಡಬಲ್ ಡೆಕರ್ ಡೀಸೆಲ್ ಬಸ್‌ಗಳನ್ನು ಹೊಂದಿದ್ದು,ಅವುಗಳ ಜೀವಿತಾವಧಿ ಮುಗಿದ ಬಳಿಕ 2023-24ರಲ್ಲಿ ಕ್ರಮೇಣ ಅವುಗಳನ್ನು ಗುಜರಿಗೆ ಹಾಕಲಾಗುವುದು.

Similar News