ಭಾರತೀಯ ಉದ್ಯೋಗಿಗಳ ಕುಟುಂಬದವರು ಇನ್ನು ಕೆನಡಾದಲ್ಲಿ ಉದ್ಯೋಗಕ್ಕೆ ಅರ್ಹರು: ವರದಿ

Update: 2022-12-04 03:01 GMT

ಒಟ್ಟಾವ: ತಾತ್ಕಾಲಿಕ ಅಂತರರಾಷ್ಟ್ರೀಯ ಉದ್ಯೋಗಿಗಳ ಕುಟುಂಬ ಸದಸ್ಯರಿಗೆ ಕೂಡಾ ಉದ್ಯೋಗ ಪರವಾನಗಿ ನೀಡುವ ಮಹತ್ವದ ನಿರ್ಧಾರಕ್ಕೆ ಕೆನಡಾ ಮುಂದಾಗಿದ್ದು, ಇದು ಅಸಂಖ್ಯಾತ ಭಾರತೀಯ ವೃತ್ತಿಪರರ ಕುಟುಂಬಗಳಿಗೆ ನೆರವಾಗಲಿದೆ ಎಂದು ndtv.com ವರದಿ ಮಾಡಿದೆ.

ಮುಂದಿನ ವರ್ಷದ ಆರಂಭದಿಂದ ಈ ನೀತಿ ಜಾರಿಗೆ ಬರುವ ನಿರೀಕ್ಷೆ ಇದೆ. ಕೆನಡಾದ ಇಮಿಗ್ರೇಶನ್, ನಿರಾಶ್ರಿತರು ಮತ್ತು ಪೌರತ್ವ ಖಾತೆ ಸಚಿವ ಸಿಯನ್ ಫ್ರೇಸರ್ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಇಲಾಖೆ ತಾತ್ಕಾಲಿಕ ವಿದೇಶಿ ಉದ್ಯೋಗಿಗಳ ಕುಟುಂಬ ಸದಸ್ಯರಿಗೆ ಕೂಡಾ ಉದ್ಯೋಗ ಪರವಾನಗಿ ನೀಡಲಿದೆ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಪತಿ/ಪತ್ನಿ ಅತ್ಯಧಿಕ ಕೌಶಲದ ವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ಆತ/ಆಕೆಯ ಪತ್ನಿ/ಪತಿಗೆ ಮಾತ್ರ ಉದ್ಯೋಗ ಪರವಾನಗಿ ನೀಡಲಾಗುತ್ತಿತ್ತು. ಈ ತಾತ್ಕಾಲಿಕ ಕ್ರಮದಿಂದ ಭಾವನಾತ್ಮಕ ಕ್ಷೇಮ, ದೈಹಿಕ ಆರೋಗ್ಯ ಮತ್ತು ಹಣಕಾಸು ಸುಸ್ಥಿರತೆಯ ಗುರಿ ಹೊಂದಲಾಗಿದೆ. ಇದರಿಂದಾಗಿ ಉದ್ಯೋಗಿಗಳು ತಮ್ಮ ಒಟ್ಟಾರೆ ಕೆಲಸದ ವಾತಾವರಣದಲ್ಲಿ ಮತ್ತು ಸಮುದಾಯದಲ್ಲಿ ಹೆಚ್ಚು ನಿಷ್ಠೆ ತೋರಲು ಸಾಧ್ಯವಾಗಲಿದೆ ಎಂದು ಇಲಾಖೆಯ ಪ್ರಕಟಣೆ ಹೇಳಿದೆ.

2023ರ ಜನವರಿಂದ ಜಾರಿಯಾಗುವ ಈ ನೀತಿ ಅನ್ವಯ ಎರಡು ವರ್ಷಗಳ ತಾತ್ಕಾಲಿಕ ಅವಧಿಗೆ ಕೆನಡಾ ಈ ಸೌಲಭ್ಯವನ್ನು ನೀಡಲಿದೆ. ಇದರಲ್ಲಿ ಆರೋಗ್ಯ ಸೇವೆ, ವ್ಯಾಪಾರ ಮತ್ತು ಆತಿಥ್ಯ ಉದ್ಯಮದ ಉದ್ಯೋಗಿಗಳು ಸೇರುತ್ತಾರೆ. ಇದರಿಂದ ಕೆನಡಾದಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಕುಟುಂಬಗಳಿಗೆ ಸೇರಿದ ಎರಡು ಲಕ್ಷಕ್ಕೂ ಹೆಚ್ಚು ಮಂದಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ndtv.com ವರದಿ ಮಾಡಿದೆ.

Similar News