ವೃತ್ತಿಜೀವನದ 1,000ನೇ ಪಂದ್ಯದಲ್ಲಿ ಸ್ಮರಣೀಯ ಗೋಲು ಗಳಿಸಿದ ಲಿಯೊನೆಲ್ ಮೆಸ್ಸಿ

Update: 2022-12-04 12:43 GMT

ದೋಹಾ: ವಿಶ್ವಕಪ್‌ನ ನಾಕೌಟ್ ಸುತ್ತಿನಲ್ಲಿ ಅರ್ಜೆಂಟೀನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ Lionel Messi ಕೊನೆಗೂ ಗೋಲು ಗಳಿಸಿದರು.  ಮೆಸ್ಸಿ ತನ್ನ ವೃತ್ತಿಜೀವನದ 1,000ನೇ ಪಂದ್ಯದಲ್ಲಿ  ಅರ್ಜೆಂಟೀನ ತಂಡ ಆಸ್ಟ್ರೇಲಿಯಾ ವಿರುದ್ಧ 2-1 ಗೋಲುಗಳಿಂದ ಗೆದ್ದ ಪಂದ್ಯದಲ್ಲಿ ಈ ಸಾಧನೆ ಮಾಡಿದರು.

ದೋಹಾದ ಅಹ್ಮದ್ ಬಿನ್ ಅಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮೊದಲಾರ್ಧದ 35ನೇ ನಿಮಿಷದಲ್ಲಿ ಅರ್ಜೆಂಟೀನ ನಾಯಕ ತನ್ನ ವೃತ್ತಿಜೀವನದ 1,000 ನೇ ಪಂದ್ಯದಲ್ಲಿ 789 ನೇ ಗೋಲು ಗಳಿಸಿದರು. 94ನೇ ಅಂತರ್ ರಾಷ್ಟ್ರೀಯ ಗೋಲು ಗಳಿಸಿದ ಮೆಸ್ಸಿ ವಿಶ್ವಕಪ್ ನಲ್ಲಿ 8ನೇ ಗೋಲು ಗಳಿಸಿ ತಮ್ಮದೇ ದೇಶದ ದಂತಕತೆ ಡಿಗೊ ಮರಡೋನರ ದಾಖಲೆಯನ್ನು ಮುರಿದರು.

ತನ್ನ ಐದನೇ ವಿಶ್ವಕಪ್‌ನಲ್ಲಿ ಆಡುತ್ತಿರುವ ಮೆಸ್ಸಿ  ಈ ಹಿಂದೆ ಪಂದ್ಯಾವಳಿಯಲ್ಲಿ ನಾಕೌಟ್ ಹಂತದಲ್ಲಿ ಗೋಲು ಗಳಿಸಿರಲಿಲ್ಲ.ಇದೀಗ  ನಾಕೌಟ್ ಹಂತದಲ್ಲಿನ ಗೋಲು ಬರವನ್ನು ನೀಗಿಸಿಕೊಂಡಿರುವ  35ರ ಹರೆಯದ ಮೆಸ್ಸಿ ಈ ಬಾರಿ ವಿಶ್ವಕಪ್ ಎತ್ತುವ ವಿಶ್ವಾಸದಲ್ಲಿದ್ದಾರೆ. ಅರ್ಜೆಂಟೀನ ಕ್ವಾರ್ಟರ್ ಫೈನಲ್ ನಲ್ಲಿ ನೆದರ್ ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ.

Similar News