ರಾಜಮೌಳಿಗೆ ಪ್ರತಿಷ್ಠಿತ ‘ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್’ ಪ್ರಶಸ್ತಿ

Update: 2022-12-04 07:53 GMT

ನ್ಯೂರ್ಯಾಕ್: ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ನಿರ್ದೇಶನದ ‘RRR’ ಚಿತ್ರ ಪಾಶ್ಚಾತ್ಯ ದೇಶಗಳ ಮಾರುಕಟ್ಟೆಯಲ್ಲಿ ಈಗಲೂ ಅಲೆ ಎಬ್ಬಿಸುತ್ತಿದ್ದು, ಇದರ ಬೆನ್ನಿಗೇ ‘ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್’ (New York Film Critics Circle) ಅವರನ್ನು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು thehindu.com ವರದಿ ಮಾಡಿದೆ.

ಶುಕ್ರವಾರ ರಾತ್ರಿ ನ್ಯೂಯಾರ್ಕ್ ಫಿಲ್ಮ್ ಸರ್ಕಲ್ ಕ್ರಿಟಿಕ್ಸ್ ಸರ್ಕಲ್ ನ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವಿಜೇತರ ಹೆಸರನ್ನು ಪ್ರಕಟಿಸಲಾಯಿತು.

ಈ ಸಿನಿಮಾ ಮೇಳದಲ್ಲಿ ರಾಜಮೌಳಿ ಪ್ರಶಸ್ತಿಗೆ ಭಾಜನರಾಗಿರುವ ಸುದ್ದಿಯನ್ನು ‘ಆರ್ ಆರ್ ಆರ್’ ಅಧಿಕೃತ ಟ್ವಿಟರ್ ಖಾತೆಯಲ್ಲೂ ಪ್ರಕಟಿಸಲಾಗಿದೆ.

“@SSRajamouli ಅವರು ಪ್ರತಿಷ್ಠಿತ ‘ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್’ನಿಂದ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. @NYFCC, ನಾವೆಷ್ಟು ಸಂತಸ ಮತ್ತು ಹೆಮ್ಮೆಗೊಳಗಾಗಿದ್ದೇವೆ ಎಂಬುದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. “ಆರ್ ಆರ್ ಆರ್’ ಚಲನಚಿತ್ರವನ್ನು ಗುರುತಿಸಿದ್ದಕ್ಕೆ ತೀರ್ಪುಗಾರರಿಗೆ ಹೃದಯಪೂರ್ವಕ ಧನ್ಯವಾದಗಳು” ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ.

ಸ್ವಾತಂತ್ರ್ಯಪೂರ್ವ ಕಾಲ್ಪನಿಕ ಕತೆಯನ್ನು ಹೊಂದಿದ್ದ ‘ಆರ್ ಆರ್ ಆರ್’ ಚಲನಚಿತ್ರದಲ್ಲಿ 1920ರ ನೈಜ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮರಾಜು ಪಾತ್ರದಲ್ಲಿ ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿಆರ್ ನಟಿಸಿದ್ದರು.

ನಿರ್ದೇಶಕ ರಾಜಮೌಳಿಯನ್ನು ಟ್ವಿಟರ್ ನಲ್ಲಿ ಅಭಿನಂದಿಸಿರುವ ನಟ ಜೂನಿಯರ್ ಎನ್ ಟಿಆರ್, ಎನ್ ವೈಎಫ್ ಸಿಸಿ ಪ್ರಶಸ್ತಿಗೆ ನಿರ್ದೇಶಕ ರಾಜಮೌಳಿ ಭಾಜನರಾಗಿರುವುದು, ಅವರ ಜಾಗತಿಕ ಸಾಧನೆಯ ಪಯಣದ ಆರಂಭವಾಗಿದೆ ಎಂದು ಬರೆದುಕೊಂಡಿದ್ದಾರೆ. “ನಾನು ನಿಮ್ಮೊಂದಿಗೆ ಅವರ ಬಗ್ಗೆ ಏನು ತಿಳಿದುಕೊಂಡಿದ್ದೆನೊ ಅದನ್ನು ಇಡೀ ವಿಶ್ವವೇ ಇಂದು ತಿಳಿದುಕೊಳ್ಳುವ ಸಮಯವಾಗಿದೆ” ಎಂದೂ ಸೇರಿಸಿದ್ದಾರೆ.

ಮಾರ್ಚ್ ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ‘ಆರ್ ಆರ್ ಆರ್’, ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ರೂ. 1200 ಕೋಟಿ ಸೂರೆ ಮಾಡಿತ್ತು. ಮೇ 20ರಂದು ಹಿಂದಿ ಅವತರಣಿಕೆಯಲ್ಲಿ ಈ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ಪ್ರದರ್ಶನಗೊಳ್ಳುತ್ತಿದ್ದಂತೆಯೆ ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯ ಭಾರತೀಯ ಸಿನಿಮಾ ಎಂಬ ಮನ್ನಣೆಗೆ ಪಾತ್ರವಾಯಿತು.

ಕೊಗೊಂಡಾರ ‘ಆಫ್ಟರ್ ಯಾಂಗ್’ ಹಾಗೂ ಮಾರ್ಟಿನ್ ಮ್ಯಾಕ್ ಡೊನಾಗ್ ರ ‘ದ ಬನ್ಷೀಸ್ ಆಫ್ ಇನ್ ಶೆರಿನ್’ ಚಿತ್ರಗಳಲ್ಲಿನ ಪಾತ್ರ ನಿರ್ವಹಣೆಗಾಗಿ ಕಾಲಿನ್ ಫಾರೆಲ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದರು.

‘ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್’ ಚಿತ್ರದಲ್ಲಿನ ಅಭಿನಯಕ್ಕಾಗಿ ಕೆ ಹ್ಯೂ ಕ್ವಾನ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದರೆ, ‘ನೋಪ್’ ಚಿತ್ರದಲ್ಲಿನ ನಟನೆಗಾಗಿ ಕೆಕೆ ಪಾಲ್ಮರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡರು.

ಇದನ್ನೂ ಓದಿ: ಪಿಎಸ್ಸೈ ಹೆಸರಲ್ಲಿ ಡೆತ್ ನೋಟ್ ಬರೆದಿಟ್ಟು ಯುವಕ ನಾಪತ್ತೆ

Similar News