ಕರಾಳ ಜಾತಿ ವ್ಯವಸ್ಥೆ; ಖರ್ಗೆ ಬಿಚ್ಚಿಟ್ಟ ಸತ್ಯ

Update: 2022-12-05 05:49 GMT

ಮೀಸಲು ವ್ಯವಸ್ಥೆಯ ಮೂಲ ಪರಿಕಲ್ಪನೆಯನ್ನೇ ನಿರ್ನಾಮ ಮಾಡಿ ಶತಮಾನಗಳಿಂದ ಅನ್ಯಾಯಕ್ಕೆ ಒಳಗಾದ ಅಸ್ಪಶ್ಯ ದಲಿತ ಸಮುದಾಯಗಳ ಬದುಕಿನ ಕತ್ತಲನ್ನು ದೂರ ಮಾಡುವ ಮೀಸಲು ವ್ಯವಸ್ಥೆಯನ್ನೇ ಸಂಪೂರ್ಣವಾಗಿ ಹಾಳು ಮಾಡುವ ಷಡ್ಯಂತ್ರದ ಭಾಗವಾಗಿ ಇವೆಲ್ಲ ನಡೆದಿವೆ ಅಂದರೆ ಅತಿಶಯೋಕ್ತಿಯಲ್ಲ.



ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುವುದೇ ಅಪರಾಧ ಎಂದು ಪರಿಗಣಿಸಲ್ಪಡುವ ಈ ಕಾಲದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮೋದಿಯವರನ್ನು ರಾವಣನಿಗೆ ಹೋಲಿಸಿದ್ದು ಭಕ್ತರ ಪಿತ್ತ ನೆತ್ತಿಗೇರುವಂತೆ ಮಾಡಿದೆ.ಮೋದಿಯವರು ಇದರಿಂದ ಅಸಮಾಧಾನಗೊಂಡಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭ ದಲ್ಲಿ ಇವೆಲ್ಲ ಸಾಮಾನ್ಯ. ಸೋನಿಯಾ ಗಾಂಧಿಯವರ ಬಗ್ಗೆ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಗ್ಗೆ ಬಿಜೆಪಿಯ ಕೆಲವರು ನಾಯಕರು ಆಡುವ ಮಾತುಗಳನ್ನು ಗಮನಿಸಿದರೆ ಖರ್ಗೆ ಆಡಿದ ಮಾತಿನಲ್ಲಿ ಅತಿರೇಕ ವಾದುದೇನೂ ಇಲ್ಲ. ಸಣ್ಣಪುಟ್ಟ ಚುನಾವಣೆಗಳಿಗೂ ಮೋದಿಯವರೇ ಪ್ರಚಾರಕ್ಕೆ ಬರುವುದನ್ನು ಟೀಕಿಸಿ ಖರ್ಗೆ ಈ ಮಾತನ್ನು ಆಡಿರಬಹುದು.

ಆದರೆ ಖರ್ಗೆಯವರು ಹೇಳಿದ ಇನ್ನೊಂದು ಮಾತು ಮಾಧ್ಯಮಗಳಲ್ಲಿ ಅಷ್ಟೊಂದು ಬೆಳಕಿಗೆ ಬರಲಿಲ್ಲ. ನರೇಂದ್ರ ಮೋದಿಯವರು ಹೋದಲ್ಲಿ, ಬಂದಲ್ಲಿ ತಾವು ಚಹಾ ಮಾರಾಟ ಮಾಡುತ್ತಿರುವ ದಿನಗಳ ಬಗ್ಗೆ ಆಗಾಗ ಹೇಳುತ್ತಾರೆ. ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ತಾನು ಪ್ರಧಾನಿ ಸ್ಥಾನಕ್ಕೆ ಬಂದೆ ಎಂದು ಚುನಾವಣಾ ಪ್ರಚಾರ ಸಭೆಗಳಲ್ಲೂ ಹೇಳಿದ್ದಾರೆ. ಇದನ್ನೇ ಲೇವಡಿ ಮಾಡಿದ ಖರ್ಗೆಯವರು, ‘ಪದೇ ಪದೇ ಚಹಾ ಮಾರಾಟದ ಬಗ್ಗೆ ಯಾಕೆ ಹೇಳುತ್ತೀರಿ.ನೀವು ಚಹಾ ಮಾರಿದರೆ ಕೊಂಡು ಕುಡಿಯುತ್ತಾರೆ. ಆದರೆ ನಾನು ಅಸ್ಪಶ್ಯ. ನಾನು ಚಹಾದ ಅಂಗಡಿ ಇಟ್ಟರೆ ನನ್ನ ಬಳಿ ಯಾರೂ ಚಹಾ ಕುಡಿಯುವುದಿಲ್ಲ’’ ಎಂದು ಹೇಳಿದ ಮಾತು ಭಾರತದ ಜಾತಿ ವ್ಯವಸ್ಥೆಯ ಕಟು ವಾಸ್ತವಕ್ಕೆ ಕನ್ನಡಿ ಹಿಡಿದಿದೆ.

ಖರ್ಗೆಯವರು ಹೊಟೇಲ್ ಬಗ್ಗೆ ಹೇಳಿದರು ಆದರೆ ಬೆಂಗಳೂರಿನ ಕಾಸ್ಮೊಪಾಲಿಟಿನ ನಗರದಲ್ಲಿ ಇಂದಿಗೂ ದಲಿತರಿಗೂ, ಮುಸಲ್ಮಾನರಿಗೂ ಬಾಡಿಗೆಗೆ ಮನೆ ಸಿಗುವುದಿಲ್ಲ.ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ.ಆರ್ಥಿಕ ಸ್ಥಾನ ಮಾನ ಸುಧಾರಿಸಿದ ಮಾತ್ರಕ್ಕೆ ಅಸ್ಪಶ್ಯತೆ ಹೋಗುವುದಿಲ್ಲ. ಈಗ ಮತೀಯವಾದಿಗಳಲ್ಲಿ ಮುಸಲ್ಮಾನರ ಬಗ್ಗೆ ಕುದಿಯುತ್ತಿರುವ ಅಸಹನೆಯ ಆಳದಲ್ಲಿ ದಲಿತ ದ್ವೇಷವೂ ತುಂಬಿಕೊಂಡಿದೆ. ಭಾರತವನ್ನು ಮತ್ತೆ ಚಾತುರ್ವರ್ಣ ಯುಗಕ್ಕೆ ಕೊಂಡೊಯ್ಯುವ ಮಸಲತ್ತು ಅಡಗಿದೆ. ಅದರ ಭಾಗವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವನ್ನು ಸ್ಥಗಿತಗೊಳಿಸಲು ಮೋದಿ ಸರಕಾರ ಹೊರಟಿದೆ. ಅಸ್ಪಶ್ಯ ಬಡ ಮಕ್ಕಳ ಸ್ಕಾಲರ್‌ಶಿಪ್ ಕಿತ್ತುಕೊಂಡು ಎಷ್ಟು ಉಳಿಸಲು ಹೊರಟಿದ್ದೀರಿ ಎಂದು ಪ್ರಶ್ನೆ ಮಾಡುವ ಧ್ವನಿಗಳು ವಿರಳವಾಗಿವೆ. ಇಂಥ ಸನ್ನಿವೇಶದಲ್ಲಿ ಖರ್ಗೆಯವರ ಮಾತು ಕಟುವಾಸ್ತವಕ್ಕೆ ಕನ್ನಡಿ ಹಿಡಿದಿದೆ.

ಖರ್ಗೆಯವರು ಈ ಮಾತನ್ನು ಲೋಕಸಭೆಯಲ್ಲಿ ಮೋದಿಯವರ ಎದುರಿಗೇ ಹೇಳಿದ್ದಾರೆ. ಅಸ್ಪಶ್ಯತೆಯ ಅವಮಾನದ ನೋವು ಅನುಭವಿಸಿದವರಿಗೇ ಗೊತ್ತು. ಸಂವಿಧಾನವನ್ನು ಸಮಾಧಿ ಮಾಡಿ ಸಾಮಾಜಿಕ ನ್ಯಾಯವನ್ನು ನೇಣಿಗೆ ಹಾಕಲು ಹೊರಟವರಿಗೆ ಆ ನೋವು ಅರ್ಥವಾಗುವುದಿಲ್ಲ. ಅಂತಲೇ ಬಾಬಾಸಾಹೇಬರು ಗರ್ಭಿಣಿಯ ಹೆರಿಗೆಯ ನೋವು ಆಕೆಗೆ ಮಾತ್ರ ಗೊತ್ತು. ಹೆರಿಗೆ ಮಾಡಿಸುವ ಸೂಲಗಿತ್ತಿಗೆ ಅದು ಅರ್ಥವಾಗುವುದಿಲ್ಲ ಎಂದು ಹೇಳಿದ್ದರು.

ಚುನಾವಣೆಗಳು ಬಂದಾಗ ಪರಿಶಿಷ್ಟ ಜಾತಿ ಮತ್ತು ವರ್ಗಗಳ ನೆನಪಾಗಿ ತರಾತುರಿಯಲ್ಲಿ ಸಮಾವೇಶಗಳನ್ನು ಮಾಡಲು ಹೊರಟವರ ಬಳಿ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿ ಗಾಗಿ ಹಂಚಿಕೆ ಮಾಡಿರುವ ಅನುದಾನ ಯಾಕೆ ಖರ್ಚಾಗಿಲ್ಲ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಇದನ್ನು ಕೇಳಬೇಕಾದ ದಲಿತ ಸಮುದಾಯವನ್ನು ಒಡೆದು ಅವರ ಧ್ವನಿ ಹತ್ತಿಕ್ಕಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಎಲ್ಲ ಸಮುದಾಯಗಳೂ ಅಸ್ಪಶ್ಯ ಸಮುದಾಯಗಳಲ್ಲ. ರಾಜಕೀಯ ಅನುಕೂಲಕ್ಕೆ ತಕ್ಕಂತೆ ಸದರಿ ಪಟ್ಟಿಯಲ್ಲಿ ಸೇರ್ಪಡೆಯಾದವರು ಮೀಸಲು ವ್ಯವಸ್ಥೆಯನ್ನು ನಾಶ ಮಾಡಲು ಹೊರಟವರ ಬೆಂಬಲಕ್ಕೆ ನಿಂತಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಧ್ವನಿಯೆತ್ತಬೇಕಾದ ಹಿಂದುಳಿದ ಸಮುದಾಯಗಳ ಅನೇಕ ಯುವಕರು ತಾವೇನು ಮಾಡುತ್ತಿದ್ದೇವೆ ಎಂಬ ಅರಿವಿಲ್ಲದೆ ಜಾತ್ರೆ, ಉತ್ಸವಗಳಲ್ಲಿ ಮುಸಲ್ಮಾನರು ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಬಾರದೆಂದು ಗಲಾಟೆ ಮಾಡುತ್ತ ತಮ್ಮ ಕೊರಳಿಗೆ ತಾವೇ ನೇಣು ಬಿಗಿದುಕೊಳ್ಳುತ್ತಿದ್ದಾರೆ. ಕಳೆದ ಲೋಕ ಸಭಾ ಚುನಾವಣೆಯಲ್ಲಿ ಖರ್ಗೆಯವರನ್ನು ಇಂಥ ಕುತಂತ್ರದಿಂದ ಸೋಲಿಸಿದರು. ತಳ ಸಮುದಾಯಗಳನ್ನು ಒಡೆದು ಖರ್ಗೆಯವರು ಸೋಲುವಂತೆ ಮಾಡಿದರು.

ಕರ್ನಾಟಕದ ಸದ್ಯದ ರಾಜಕಾರಣಿಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಬದ್ಧವಾಗಿರುವ ಕೆಲವೇ ಕೆಲವು ನಾಯಕರಲ್ಲಿ ಎದ್ದು ಕಾಣುವವರು ಮಲ್ಲಿಕಾರ್ಜುನ ಖರ್ಗೆಯವರು ಮತ್ತು ಸಿದ್ದರಾಮಯ್ಯನವರು. ಬಹಳ ಜನ ಖರ್ಗೆಯವರ ಉತ್ತರ ಕರ್ನಾಟಕದ ಖಡಕ್ ಭಾಷೆಯನ್ನು ಕೇಳಿ ಅವರಿಗೇನೂ ಗೊತ್ತಿಲ್ಲವೆಂದು ತಿಳಿದಿದ್ದಾರೆ. ಆದರೆ ನನಗೆ ತಿಳಿದಿರುವಂತೆ ಖರ್ಗೆಯವರಿಗೆ ಪ್ರತೀ ನಿತ್ಯ ಅತ್ಯುತ್ತಮ ಪುಸ್ತಕಗಳನ್ನು ಓದುವ ಅಭ್ಯಾಸವಿದೆ. ರಾಜಕೀಯ, ಸಮಾಜ ಶಾಸ್ತ್ರ, ತತ್ವಶಾಸ್ತ್ರ , ಇತಿಹಾಸ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಕನಿಷ್ಠ ಐದಾರು ತಾಸು ಕಾಲ ಅಧ್ಯಯನ ಮಾಡುತ್ತಾರೆ. ಅವರ ಸದನದ ಭಾಷಣಗಳನ್ನು ಗಮನಿಸಿದರೆ ಅವರ ಓದಿನ ವ್ಯಾಪ್ತಿ ಗೊತ್ತಾಗುತ್ತದೆ. ಖರ್ಗೆಯವರು ಮೂಲತಃ ಕಾಂಗ್ರೆಸ್‌ನವರಲ್ಲ. 1970ರಲ್ಲಿ ಕಲಬುರಗಿಯಲ್ಲಿ ಕಾನೂನು ಪದವಿಯನ್ನು ಪಡೆದು ವಕೀಲಿ ನಡೆಸುವಾಗಲೇ ಅಂಬೇಡ್ಕರ್ ಅವರ ರಿಪಬ್ಲಿಕನ್ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದರು. ಜೊತೆಗೆ ಕಮ್ಯುನಿಸ್ಟ್ ನಾಯಕರಾದ ಶ್ರೀನಿವಾಸ ಗುಡಿ ಮತ್ತು ಗಂಗಾಧರ ನಮೋಶಿಯವರ ಜೊತೆಗೆ ಸೇರಿ ಎಂ.ಎಸ್.ಕೆ.ಮಿಲ್ ಕಾರ್ಮಿಕರ ಸಂಘಟನೆಯಲ್ಲಿ ನಿರತರಾಗಿದ್ದರು.

ಅದು ಕಾಂಗ್ರೆಸ್ ಇಬ್ಭಾಗವಾದ ಕಾಲ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಯವರು ಬ್ಯಾಂಕುಗಳ ರಾಷ್ಟ್ರೀಕರಣ ಮತ್ತು ರಾಜಧನ ರದ್ದತಿ ಮಾಡಿದ್ದನ್ನು ವಿರೋಧಿಸಿದ ನೀಲಂ ಸಂಜೀವ ರೆಡ್ಡಿ, ನಿಜಲಿಂಗಪ್ಪ, ಅತುಲ್ಯ ಘೋಷ್, ಎಸ್.ಕೆ.ಪಾಟೀಲ ಮುಂತಾದವರು ಕಾಂಗ್ರೆಸ್ ಇಬ್ಭಾಗಕ್ಕೆ ಕಾರಣರಾದರು. ಕರ್ನಾಟಕದಲ್ಲಿ ಇಂದಿರಾ ಗಾಂಧಿ ಅವರ ಜೊತೆಗೆ ನಿಂತವರು ದೇವರಾಜ ಅರಸು, ಮಯ ಕೋಲೂರು ಮಲ್ಲಪ್ಪ, ಬಸವಲಿಂಗಪ್ಪ ಮತ್ತು ಕೆ.ಎಚ್. ರಂಗನಾಥ ಮಾತ್ರ. ಅಂಥ ಸನ್ನಿವೇಶದಲ್ಲಿ ಕಲಬುರಗಿಯ ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಮುಂತಾದವರನ್ನು ಗುರುತಿಸಿ ಪಕ್ಷಕ್ಕೆ ಬರಮಾಡಿಕೊಂಡ ಅರಸು ಅವರಿಗೆ ನಾಯಕತ್ವ ನೀಡಿದರು.

ಹೀಗೆ ಬೆಳೆದು ಬಂದ ಖರ್ಗೆ ಮತ್ತು ಧರಂಸಿಂಗ್ ಹಿಂದೆ ಹೈದರಾಬಾದ್ ಕರ್ನಾಟಕ ಎಂದು ಕರೆಯಲ್ಪಡುತ್ತಿದ್ದ ಈಗ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣಗೊಂಡ ಪ್ರದೇಶ ದಲ್ಲಿ ಹೇಗೆ ಇಷ್ಟು ಎತ್ತರಕ್ಕೆ ಬೆಳೆದು ನಿಂತರೆಂಬುದೇ ಅಚ್ಚರಿಯ ಸಂಗತಿ. ಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ಪಾಳೆಯಗಾರಿ, ಜಮೀನ್ದಾರಿ ಶಕ್ತಿಗಳ ಪ್ರಾಬಲ್ಯದ ಕೇಂದ್ರವಾಗಿದ್ದ ಈ ಭಾಗದಲ್ಲಿ ಅಕ್ಷರ ವಂಚಿತ, ಅಸ್ಪಶ್ಯ ಸಮುದಾಯದಿಂದ ಬಂದು ಸತತವಾಗಿ ಐದು ದಶಕಗಳ ಕಾಲ ಚುನಾಯಿತರಾಗಿ ಬರುವುದು ತಮಾಷೆಯ ಸಂಗತಿಯಲ್ಲ. ಕಲಬುರಗಿಗೆ ಖರ್ಗೆ ಸಾಕಷ್ಟು ಕೊಟ್ಟರು. ವಿಶೇಷ ಸ್ಥಾನಮಾನ ಕಲ್ಪಿಸಿದರು. ಆದರೂ ಜಾತಿ ರಾಜಕಾರಣದಲ್ಲಿ ಮತ್ತು ಗುಜರಾತಿಗಳಿಬ್ಬರ ಮಸಲತ್ತಿನಿಂದಾಗಿ ಗೆದ್ದು ಬರಲಾಗಲಿಲ್ಲ.

ಖರ್ಗೆಯವರು ಹೇಳದೇ ಉಳಿದ ಮಾತೊಂದಿದೆ. ಬಾಬಾ ಸಾಹೇಬರು ಮಹಾತ್ಮಾ ಗಾಂಧಿಯವರ ಜೊತೆ ಸಂಘರ್ಷಕ್ಕೆ ಇಳಿದು, ಕಿತ್ತಾಡಿ ಮೀಸಲು ವ್ಯವಸ್ಥೆ ಬರುವಂತೆ ಮಾಡಿದರು. ಪುಣಾ ಒಪ್ಪಂದದಲ್ಲಿ ಎಷ್ಟೇ ಲೋಪಗಳಿದ್ದರೂ ಅನಿವಾರ್ಯ ಕಾರಣಗಳಿಂದಾಗಿ ಅದಕ್ಕೆ ಅಂಬೇಡ್ಕರ್ ಅಂಕಿತ ಹಾಕಬೇಕಾಯಿತು. ಆದರೆ ರಾಜಕೀಯವಾಗಿ ಮೀಸಲು ಮತಕ್ಷೇತ್ರಗಳಿಂದ ಇತ್ತೀಚೆಗೆ ಗೆದ್ದು ಬರುವವರ ಪಟ್ಟಿ ಮಾಡಿದರೆ ಅದರಲ್ಲಿ ಅಸ್ಪಶ್ಯ ಸಮುದಾಯಗಳಿಗಿಂತ ಸ್ಪಶ್ಯ ಸಮುದಾಯಗಳಿಗೆ ಸೇರಿದ ಆದರೆ ಸಾಮಾಜಿಕವಾಗಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಾರೆ. ಸರಕಾರಿ ನೇಮಕಾತಿಯಲ್ಲೂ ಅಸ್ಪಶ್ಯ ದಲಿತರಿಗೆ ಅನ್ಯಾಯವಾಗುತ್ತಿದೆ. ಇದರ ಬಗ್ಗೆ ಗೊತ್ತಿದ್ದರೂ ಖರ್ಗೆಯವರು ಹೇಳುವುದಿಲ್ಲ. ಅದು ಅವರ ದೊಡ್ಡತನ.

ಶತಮಾನಗಳಿಂದ ಅನ್ಯಾಯಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಒದಗಿಸಲು ಬಂದಿರುವ ಮೀಸಲು ವ್ಯವಸ್ಥೆ ಈಗ ಚುನಾವಣಾ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಇಷ್ಟು ವರ್ಷ ಮೀಸಲು ವ್ಯವಸ್ಥೆಯನ್ನು ವಿರೋಧಿಸಿಕೊಂಡು ಬಂದವರಿಗೂ ಈಗ ಮೀಸಲು ಸೌಲಭ್ಯ ಬೇಕಾಗಿದೆ. ತಮ್ಮ ಸಮುದಾಯಗಳಿಗೆ ಮೀಸಲಾತಿಬೇಕೆಂದು ಆಯಾ ಸಮುದಾಯಗಳ ಮಠಾಧೀಶರೇ ಈಗ ಸರಕಾರಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಮೀಸಲಾತಿ ಎಂಬುದು ಬಡತನ ನಿವಾರಣಾ ಕಾರ್ಯಕ್ರಮವಲ್ಲ. ಆರ್ಥಿಕ ಅಸಮಾನತೆ ನಿವಾರಿಸಲು ಬೇರೆ ಯೋಜನೆಗಳಿವೆ. ಮೀಸಲಾತಿ ಎಂಬುದು ಸಾಮಾಜಿಕ ಅಸಮಾನತೆ, ಜಾತಿ ಶೋಷಣೆಯನ್ನು ನಿವಾರಿಸುವ ಉದ್ದೇಶದಿಂದ ತರಲಾಗಿರುವ ವ್ಯವಸ್ಥೆ ಎಂಬುದನ್ನು ಬಸವಣ್ಣನವರ ಹೆಸರು ಹೇಳಿಕೊಳ್ಳುವ ಮಠಾಧೀಶರೂ ಮರೆತಂತೆ ಜಾಣತನದಿಂದ ವರ್ತಿಸುತ್ತಿದ್ದಾರೆ. ಖರ್ಗೆಜಿಯವರ ನೋವನ್ನು ಈ ಎಲ್ಲ ವಿದ್ಯಮಾನಗಳ ಹಿನ್ನಲೆಯಲ್ಲಿ ವ್ಯಾಖ್ಯಾನಿಸಬೇಕಾಗಿದೆ.

ಈಗಂತೂ ಮೀಸಲು ವ್ಯವಸ್ಥೆಯ ಸ್ವರೂಪವೇ ಬದಲಾಗುತ್ತಿದೆ.ಮೋದಿ ಸರಕಾರ ಇತ್ತೀಚೆಗೆ ಸಂವಿಧಾನದ 103 ತಿದ್ದುಪಡಿ ತರುವ ಮೂಲಕ ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಗಳಿಗೆ (ಇಡಬ್ಲು ಎಸ್) ಶಿಕ್ಷಣ ಮತ್ತು ನೌಕರಿಗಳಲ್ಲಿ ಶೇಕಡಾ ಹತ್ತು ಮೀಸಲಾತಿಯನ್ನು ಕಲ್ಪಿಸಿದೆ. ಮೀಸಲು ವ್ಯವಸ್ಥೆ ಬಂದಿರುವದು ಜಾತಿಯ ಕಾರಣಕ್ಕಾಗಿ ಉಂಟಾಗಿರುವ ಸಾಮಾಜಿಕ ಅಸಮಾನತೆಯನ್ನು ತೊಲಗಿಸಲು. ಆದರೆ ಅದರ ಮಾನದಂಡವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿರುವ ರಾಜಕೀಯವಾಗಿ ಪ್ರಬಲವಾಗಿರುವ ಸಮುದಾಯಗಳು ಮೀಸಲು ವ್ಯವಸ್ಥೆಯ ಜೀವ ಸತ್ವವನ್ನೇ ಅರ್ಥಹೀನಗೊಳಿಸಿವೆ.

ಹೀಗೆ ಮೀಸಲು ವ್ಯವಸ್ಥೆಯ ಮೂಲ ಪರಿಕಲ್ಪನೆಯನ್ನೇ ನಿರ್ನಾಮ ಮಾಡಿ ಶತಮಾನಗಳಿಂದ ಅನ್ಯಾಯಕ್ಕೆ ಒಳಗಾದ ಅಸ್ಪಶ್ಯ ದಲಿತ ಸಮುದಾಯಗಳ ಬದುಕಿನ ಕತ್ತಲನ್ನು ದೂರ ಮಾಡುವ ಮೀಸಲು ವ್ಯವಸ್ಥೆಯನ್ನೇ ಸಂಪೂರ್ಣವಾಗಿ ಹಾಳು ಮಾಡುವ ಷಡ್ಯಂತ್ರದ ಭಾಗವಾಗಿ ಇವೆಲ್ಲ ನಡೆದಿವೆ ಅಂದರೆ ಅತಿಶಯೋಕ್ತಿಯಲ್ಲ.

ಫ್ಯಾಶಿಸ್ಟ್ ಪ್ರಭುತ್ವದ ಅಸಮಾನತೆಯ ಅನ್ಯಾಯಗಳಿಗೆಲ್ಲ ಒಮ್ಮಾಮ್ಮೆ ವೌನ ತಾಳಿದರೂ ಆಗಾಗ ತಡೆಯೊಡ್ಡುತ್ತ ಬಂದ ನ್ಯಾಯಾಂಗವನ್ನೇ ನಿಷ್ಕ್ರಿಯ ಗೊಳಿಸುವ ಹುನ್ನಾರಗಳು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವ ಈ ದಿನಗಳಲ್ಲಿ ನ್ಯಾಯಾಂಗ ಮಾತ್ರವಲ್ಲ ಪ್ರಜಾಪ್ರಭುತ್ವದ ಆಧಾರ ಸ್ತಂಭವಾದ ಸಂವಿಧಾನವನ್ನು ಸಂರಕ್ಷಿಸುವ ಹೊಣೆ ಶೋಷಿತ ವರ್ಗಗಳು ಮಾತ್ರವಲ್ಲ ಎಲ್ಲ ದೇಶಪ್ರೇಮಿ ನಾಗರಿಕರ ಮೇಲಿದೆ.

Similar News