ವಾಯುಯಾನ ಸುರಕ್ಷತಾ ರ‍್ಯಾಂಕಿಂಗ್: ಭಾರತಕ್ಕೆ 48ನೇ ಸ್ಥಾನ

Update: 2022-12-04 18:27 GMT

ಹೊಸದಿಲ್ಲಿ,ಡಿ.4: ಜಾಗತಿಕ ವಾಯುಯಾನ ಸುರಕ್ಷತಾ ರ್ಯಾಂಕಿಂಗ್‌ನಲ್ಲಿ ಭಾರತವು 48ನೇ ಸ್ಥಾನಕ್ಕೆ ಜಿಗಿದಿದ್ದು, ದೇಶಕ್ಕೆ ಈವರೆಗೆ ದೊರೆತ ಗರಿಷ್ಠ ರ‍್ಯಾಂಕಿಂಗ್ಆಗಿದೆ ಎಂದು ನಾಗರಿಕ ವಾಯುಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.

ನಾಲ್ಕು ವರ್ಷಗಳ ಹಿಂದೆ, ವಾಯುಯಾನ ಸುರಕ್ಷತಾ ರ‍್ಯಾಂಕಿಂಗ್ ನಲ್ಲಿ ಭಾರತವು 102ನೇ ಸ್ಥಾನದಲ್ಲಿತ್ತು. ಪ್ರಮುಖ ಸುರಕ್ಷತಾ ಅಂಶಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ದೇಶದ ಅಂಕವು 85.49 ಶೇಕಡ ಆಗಿದ್ದು, ಚೀನಾ (49 ಶೇ.), ಇಸ್ರೇಲ್ (50 ಶೇ.) ಹಾಗೂ ಟರ್ಕಿ (54ಶೇ.)ದೇಶಗಳಿಗಿಂತ ಮುಂದಿದೆ.

2018ರ ಸಾರ್ವತ್ರಿಕ ಸುರಕ್ಷತಾ ಪರಿಶೋಧನಾ ವಿಭಾಗದಲ್ಲಿ ಭಾರತದ ಅಂಕವು 69.95 ಶೇಕಡ ಆಗಿದೆಯೆಂದು ಡಿಜಿಸಿಎ ತಿಳಿಸಿದೆ. ವಿಶ್ವಸಂಸ್ಥೆಯ ಅಧೀನದಲ್ಲಿರುವ ಅಂತಾರಾಷ್ಟ್ರೀಯ ನಾಗರಿಕ ವಾಯುಯಾನ ಸಂಸ್ಥೆ (ಐಸಿಎಓ) ನವೆಂಬರ್ 9ರಿಂದ 16ರವರೆಗೆ ವಾಯುಯಾನ ಸುರಕ್ಷತೆಗೆ ಸಂಬಂಧಿಸಿದ ಮೌಲ್ಯಮಾಪನಗಳನ್ನು ನಡೆಸಿ ಈ ರ್ಯಾಂಕಿಂಗ್ ಅನ್ನು ಘೋಷಿಸಿದೆ. ವಾಯುಯಾನ ಸುರಕ್ಷತೆ ಕುರಿತಂತೆ ಆಯಾ ರಾಷ್ಟ್ರಗಳು ಜಾರಿಗೊಳಿಸಿರುವ ಶಾಸನಗಳು,ವಿಮಾನಗಳ ನಿರ್ವಹಣೆ ಹಾಗೂ ಚಾಲನೆಗೆ ಪರವಾನಿಗೆ, ವಿಮಾನ ನಿಲ್ದಾಣದ ಗುಣಮಟ್ಟ ಮತ್ತಿತರ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ರ್ಯಾಂಕಿಂಗ್ ನೀಡಲಾಗುತ್ತದೆ.

 ನಾಗರಿಕ ವಾಯುಯಾನ ಸಂಸ್ಥೆಗಳ ಗುಣಮಟ್ಟದಲ್ಲಿ ಭಾರತದ ಅಂಕವು 63.64 ಶೇಕಡದಿಂದ 72.73 ಶೇಕಡಕ್ಕೇರಿದೆ. ವೈಮಾನಿಕ ಸಿಬ್ಬಂದಿಗೆ ಲೈಸೆನ್ಸ್ ನೀಡಿಕೆ ಹಾಗೂ ತರಬೇತಿ ಕುರಿತಾದ ಅಂಕವು 25.58 ಶೇಕಡದಿಂದ 84.71 ಶೇಕಡಕ್ಕೇರಿದೆ. ವೈಮಾನಿಕ ನಿರ್ವಹಣಾ ಅಂಕವು 80.34 ಶೇಕಡದಿಂದ 97.44 ಶೇಕಡಕ್ಕೆ ತಲುಪಿದೆ, ವಿಮಾನದ ಹಾರಾಟದ ಗುಣಮಟ್ಟದ ಅಂಕದಲ್ಲಿ ಶೇ.90.20ರಿಂದ ಶೇ.97.06 ಶೇಕಡ ಹೆಚ್ಚಳವಾಗಿದೆ ಹಾಗೂ ವಿಮಾನನಿಲ್ದಾಣ ಹಾಗೂ ನೆಲದಲ್ಲಿ ದೊರೆಯುವ ನೆರವಿನ ಕುರಿತ ಅಂಕವು 72.36 ಶೇಕಡದಿಂದ 92.68 ಶೇಕಡಕ್ಕೇರಿದೆ.

Similar News