ಆಸ್ಪತ್ರೆಗಾಗಿ ಅಲೆದಾಟ ನಡೆಸಿ ಸೂಕ್ತ ಚಿಕಿತ್ಸೆ ಸಿಗದೆ ಕೊನೆಯುಸಿರೆಳೆದ ತಾಯಿ, ಮಗು: ಆರೋಪ

Update: 2022-12-05 08:11 GMT

ಜೈಪುರ: ಅತ್ಯಂತ ತುರ್ತು ಹೆರಿಗೆ ಸೇವೆಯ ಅಗತ್ಯವಿದ್ದ 21 ವರ್ಷದ ಗರ್ಭಿಣಿಯೊಬ್ಬಳು ಮೂರು ಆಸ್ಪತ್ರೆಗಳಿಗೆ ಅಲೆದು ನಂತರ ಸೂಕ್ತ ಚಿಕಿತ್ಸೆ ದೊರೆಯದೆ ಆಕೆ ಮತ್ತು ಆಕೆಯ ಅವಳ ಶಿಶುಗಳ ಪೈಕಿ ಓರ್ವ ಶಿಶು ಮೃತಪಟ್ಟಿರುವ ಘಟನೆ ಭರತ್ ಪುರ್ ನಲ್ಲಿ ಜರುಗಿದೆ. ಸೂಕ್ತ ಮಾರ್ಗದರ್ಶನ ನೀಡದ ಕಾರಣಕ್ಕೆ ಈ ಅಲೆದಾಟದಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಸಂತ್ರಸ್ತೆಯ ಕುಟುಂಬದ ಸದಸ್ಯರು ಆರೋಪಿಸಿದ್ದು, ಆಕೆಗೆ ಮೊದಲ ಬಾರಿಗೆ ಚಿಕಿತ್ಸೆ ನೀಡಿದ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಅವರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ ಎಂದು timesofindia ವರದಿ ಮಾಡಿದೆ.

ಸರ್ಕಾರಿ ಜನಾನಾ ಆಸ್ಪತ್ರೆಯಲ್ಲಿ ಮೊದಲ ಮಗುವಿಗೆ ಜನ್ಮ ನೀಡಿ, ಎರಡನೆ ಮಗುವನ್ನು ಗರ್ಭದಲ್ಲಿ ಹೊಂದಿದ್ದ ಸಪ್ನಾಳನ್ನು ತಡರಾತ್ರಿ ಖಾಸಗಿ ಆಸ್ಪತ್ರೆಗೆ ಖಾಸಗಿ ಆ್ಯಂಬುಲೆನ್ಸ್ ನಲ್ಲಿ ಸಾಗಿಸುವಾಗ ಆಕೆ ಕೊನೆಯುಸಿರೆಳೆದಿದ್ದಳು.

ಜನಾನಾ ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದ ಸಾವು ಸಂಭವಿಸಿದೆ ಎಂದು ಮೃತ ಮಹಿಳೆಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ನಿರಾಕರಿಸಿರುವ ವೈದ್ಯರು, ಮೃತ ಮಹಿಳೆಯ ಸಂಬಂಧಿಕರು ತಮ್ಮ ಸ್ವಂತ ನಿರ್ಧಾರದ ಮೇಲೆ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಮಹಿಳೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಲಾಗಿದೆ. ಇದರಿಂದ ಅವರು ತರಾತುರಿಯಲ್ಲಿ ಮತ್ತೊಂದು ಸರ್ಕಾರಿ ಆಸ್ಪತ್ರೆಯ ಸೇವೆ ಪಡೆಯಲು ಅಲೆದಾಡುವಂತಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ದೌಲತ್ ಪುರ್ ಗ್ರಾಮದ ನಿವಾಸಿ ಹಾಗೂ ಮೃತ ಸಪ್ನಾಳ ಮಾವ ಶ‍್ಯಾಮ್ ಸಿಂಗ್, ತನ್ನ ಸೊಸೆಯ ಮೊದಲ ಹೆರಿಗೆ ಜನಾನಾ ಆಸ್ಪತ್ರೆಯಲ್ಲೇ ಆಯಿತು. ಈ ಸಂದರ್ಭದಲ್ಲಿ ಆಕೆಯನ್ನು ತುರ್ತು ನಿಗಾ ಘಟಕಕ್ಕೆ ಸೇರಿಸಲು ವೈದ್ಯರು ಸಲಹೆ ನೀಡಿದರು. ಆದರೆ, ಅಲ್ಲಿ ಆ ಸೌಲಭ್ಯ ಲಭ್ಯವಿಲ್ಲದೆ ಇದ್ದುದರಿಂದ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಬಹುದು ಎಂದು ಸೂಚಿಸಿದರು ಎಂದು ಹೇಳಿದ್ದಾರೆ.

ಆದರೆ, ಖಾಸಗಿ ಆಸ್ಪತ್ರೆಯವರು ತನ್ನ ಸೊಸೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರು ಮತ್ತು ಜನಾನಾ ಆಸ್ಪತ್ರೆಗೆ ಮರಳಿ ಕಳಿಸಿದರು. ಇದಾದ ನಂತರ ಅಲ್ಲಿನ ವೈದ್ಯರು ತುರ್ತು ನಿಗಾ ಘಟಕ ಸೌಲಭ್ಯ ಹೊಂದಿರುವ ಆರ್ ಬಿಎಂ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದರು. ಆದರೆ, ನಾವು ಅಲ್ಲಿಗೆ ತಲುಪುವ ವೇಳೆಗಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ. ಆದರೆ, ಜನಾನಾ ಆಸ್ಪತ್ರೆಯ ಮೂಲಗಳು ಈ ಆರೋಪವನ್ನು ಅಲ್ಲಗಳೆದಿವೆ.

“ಶುಕ್ರವಾರ ಸಂಜೆ 5 ಗಂಟೆಗೆ ರೋಗಿಯನ್ನು ಆಸ್ಪತ್ರೆಗೆ ಕರೆ ತಂದಾಗ ಆಕೆ ಅದಾಗಲೇ ಹೆರಿಗೆ ಸಮಯದಲ್ಲಿ ಕಾಣಿಸಿಕೊಳ್ಳುವ ಹಾಗೂ ಗರ್ಭಪಾತಕ್ಕೂ ಕಾರಣವಾಗಬಹುದಾದ ಅಧಿಕ ರಕ್ತದೊತ್ತಡ ಸಮಸ್ಯೆಯಾದ ಪ್ರೀಕ್ಲಾಂಪ್ಸಿಯಾದಿಂದ ಬಳಲುತ್ತಿದ್ದಳು. ಇದಲ್ಲದೆ ಗಂಭೀರ ರಕ್ತ ಹೀನತೆಗೊಳಗಾಗಿದ್ದ ಆಕೆ ಗರ್ಭದಲ್ಲಿ ಎಂಟು ತಿಂಗಳ ಅವಳಿ ಶಿಶುಗಳನ್ನು ಹೊಂದಿದ್ದಳು. ನಮ್ಮ ಬಳಿ ಸೀಮಿತ ಸೌಲಭ್ಯಗಳಿದ್ದುದರಿಂದ ಆಕೆಯನ್ನು ಜೈಪುರದಲ್ಲಿನ ಮಹಿಳಾ ಚಿಕಿತ್ಸಾಲಯಕ್ಕೆ ಕೊಂಡೊಯ್ಯಲು ಸೂಚಿಸಿ, ಆ್ಯಂಬುಲೆನ್ಸ್ ಒಂದನ್ನು ಒದಗಿಸಿಕೊಟ್ಟೆವು. ಆದರೆ, ರೋಗಿಯ ಪಾಲಕರು ಆಕೆಯನ್ನು ಜೈಪುರಕ್ಕೆ ಸಾಗಿಸಲು ನಿರಾಕರಿಸಿದರು. ಅವರು ಬಲವಂತಪಡಿಸಿದ ನಂತರವಷ್ಟೇ ಆಕೆಯನ್ನು ಜನಾನಾ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಯಿತು” ಎಂದು ಜನಾನಾ ಆಸ್ಪತ್ರೆಯ ಅಧೀಕ್ಷಕಿ ಡಾ. ಜಿಗ್ಯಾಸಾ ಸಾಹ್ನಿ ಹೇಳಿದ್ದಾರೆ ಎಂದು timesofindia ವರದಿ ಮಾಡಿದೆ.

Similar News