ಬಲವಂತದ ಮತಾಂತರ ಸಂವಿಧಾನಕ್ಕೆ ವಿರುದ್ಧ: ಸುಪ್ರೀಂಕೋರ್ಟ್

Update: 2022-12-05 12:22 GMT

ಹೊಸದಿಲ್ಲಿ: ಬಲವಂತದ ಮತಾಂತರ (Forced religious conversion) ಒಂದು ಗಂಭೀರ ವಿಚಾರ ಎಂಬುದನ್ನು ಒತ್ತಿ ಹೇಳಿದ ಸುಪ್ರೀಂ ಕೋರ್ಟ್ ಈ ರೀತಿಯ ಮತಾಂತರ ಸಂವಿಧಾನಕ್ಕೆ (Constitution) ವಿರುದ್ಧವಾಗಿದೆ ಎಂದು ಹೇಳಿದೆ.

ಬೆದರಿಕೆ, ಒತ್ತಾಯ, ಹಣದ ಆಮಿಷ ಸಹಿತ ಇತರ ಅಕ್ರಮ ವಿಧಾನಗಳ ಮೂಲಕ ನಡೆಯುವ ಧಾರ್ಮಿಕ ಮತಾಂತರಗಳನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಬೇಕು ಎಂದು ಕೋರಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮೇಲಿನಂತೆ ಹೇಳಿದೆ.

ಅಕ್ರಮ ವಿಧಾನಗಳ ಮೂಲಕ ನಡೆಯುವ ಮತಾಂತರಗಳ ಕುರಿತಂತೆ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಕೇಂದ್ರ ನ್ಯಾಯಾಲಯಕ್ಕೆ ತಿಳಿಸಿದೆ ಹಾಗೂ ಈ ಮಾಹಿತಿ ಸಲ್ಲಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸಮಯಾವಕಾಶ ಕೋರಿದ್ದಾರೆ.

"ಚ್ಯಾರಿಟಿ ನಡೆಸುವ ಉದ್ದೇಶ ಉತ್ತಮವಾಗಿದ್ದರೆ ಸರಿ, ಅದು ಸ್ವಾಗತಾರ್ಹ, ಆದರೆ ಇದರ ಹಿಂದಿನ ಉದ್ದೇಶವನ್ನು ಪರಿಗಣಿಸಬೇಕಿದೆ. ಅಂತಿಮವಾಗಿ ಬಲವಂತದ ಮತಾಂತರ ಸಂವಿಧಾನಕ್ಕೆ ವಿರುದ್ಧವಾಗಿದೆ.  ಭಾರತದಲ್ಲಿರುವಾಗ ಎಲ್ಲರೂ ಅಲ್ಲಿನ ಸಂಸ್ಕೃತಿಯಂತೆಯೇ ನಡೆದುಕೊಳ್ಳಬೇಕು,'' ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರ ಪೀಠ ಹೇಳಿದೆ.

ಡಿಸೆಂಬರ್ 12 ರಂದು ಮುಂದಿನ ವಿಚಾರಣೆ ನಡೆಯಲಿದೆ.

Similar News