ಮತಗಟ್ಟೆ ಬಳಿ 'ರೋಡ್ ಶೋ' ನಡೆಸಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೂರು ದಾಖಲು

Update: 2022-12-06 06:57 GMT

ಹೊಸದಿಲ್ಲಿ: ಅಹಮದಾಬಾದ್‌ನಲ್ಲಿ ಸೋಮವಾರ ನಡೆದ ಎರಡನೇ ಹಂತದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಹೋದ ಸಂದರ್ಭ ರೋಡ್ ಶೋ ನಡೆಸಿದ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ Prime Minister Narendra Modi ವಿರುದ್ಧ ಗುಜರಾತ್ ಚುನಾವಣಾ ಆಯೋಗ ದೂರು ಸ್ವೀಕರಿಸಿದೆ.

ಬಿಜೆಪಿ ಬಾವುಟ ಹಿಡಿದು ಕೇಸರಿ ಸ್ಕಾರ್ಫ್ ಧರಿಸಿದ್ದ ಮೋದಿ ರಾಣಿಪ್‌ನ ಮತಗಟ್ಟೆಯಿಂದ 500-600 ಮೀ. ದೂರ ನೆರೆದಿದ್ದ ಜನರೊಂದಿಗೆ ನಡೆದುಕೊಂಡು ಹೋದರು ಎಂದು ರಾಜ್ಯ ಕಾಂಗ್ರೆಸ್ ನ ಕಾನೂನು ಘಟಕದ ಅಧ್ಯಕ್ಷ ಯೋಗೇಶ್ ರಾವಣಿ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

“ಪ್ರಧಾನಿ ಮೋದಿ ಅವರು ಮತಗಟ್ಟೆಯ ಗೇಟ್‌ನಿಂದಲೇ ಹೊರಬರಬಹುದಿತ್ತು. ಆದರೆ ಅವರು ಮುಂಚೆಯೇ ಹೊರ ನಡೆದರು ಮತ್ತು ದಾರಿಯಲ್ಲಿ ಕೆಲವು ಜನರೊಂದಿಗೆ ಸಂವಹನ ನಡೆಸಿದರು. ಈ ವರ್ತನೆಯು  ಬಿಜೆಪಿ ಪರ ಪ್ರಚಾರ ಮಾಡಿ ಮತದಾನದ ದಿನದಂದು ಮತದಾರರ ಮೇಲೆ ಪ್ರಭಾವ ಬೀರುವಂತಿದೆ'' ಎಂದು ರಾವಣಿ ಆರೋಪಿಸಿದರು.

ಪ್ರಧಾನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಒತ್ತಾಯಿಸಿದೆ.

ಮುಖ್ಯ ಚುನಾವಣಾಧಿಕಾರಿ ಪಿ.  ಭಾರತಿ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ ರಾವಣಿ ಅವರು, "ಈ ವಿಚಾರವನ್ನು ಪರಿಶೀಲಿಸುವುದಾಗಿ ಚುನಾವಣಾ ಆಯೋಗವು ನಮಗೆ ಭರವಸೆ ನೀಡಿದೆ" ಎಂದು ಹೇಳಿದರು.

Similar News