ಬಿಜೆಪಿ ಕಚೇರಿ ಮೇಲೆ ನಿಂತು ಭಾರತ್ ಜೋಡೊ ಯಾತ್ರೆ ವೀಕ್ಷಿಸುತ್ತಿದ್ದ ಜನರಿಗೆ ರಾಹುಲ್ ಗಾಂಧಿ 'ಫ್ಲೈಯಿಂಗ್ ಕಿಸ್'

Update: 2022-12-06 08:16 GMT

ಜಾಲ್ವರ್(ರಾಜಸ್ಥಾನ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ ರಾಜಸ್ಥಾನದಲ್ಲಿ ಸಾಗುತ್ತಿದೆ. ಮಂಗಳವಾರ ಮುಂಜಾನೆ ಖೇಲ್ ಸಂಕುಲದಿಂದ ಯಾತ್ರೆ ಆರಂಭವಾಗಿದ್ದು, ಜಾಲ್ವರ್ ನಗರ ದಾಟಿ ಮುಂದೆ ಸಾಗಿದೆ.

ಜಾಲ್ವರ್ ತಲುಪಿದ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿದ್ದ ಬಿಜೆಪಿ ಕಚೇರಿಯ ಮಹಡಿ ಮೇಲೆ ಹಲವು ಮಂದಿ ನಿಂತು ಯಾತ್ರೆ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ನಿಂತಿದ್ದರು. ಅವರಿಗೆ ಫ್ಲೈಯಿಂಗ್ ಕಿಸ್ ಮೂಲಕ ರಾಹುಲ್ ಗಾಂಧಿ ಧನ್ಯವಾದ ಹೇಳಿದರು.

ರಾಹುಲ್ ಹೀಗೆ ಮಾಡಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಾಜಸ್ಥಾನದ ಯುವ ಕಾಂಗ್ರೆಸ್ ಈ ವೀಡಿಯೊವನ್ನು ಟ್ವೀಟ್ ಮಾಡಿ, “ದ್ವೇಷಕ್ಕೆ ಉತ್ತರ ಪ್ರೀತಿ ಮಾತ್ರ. ಈ ಚಿತ್ರ ನೋಡಿ'' ಎಂದು ಹಿಂದಿಯಲ್ಲಿ ಟ್ವೀಟಿಸಿದೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಾಸ್ರಾ, ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ಹಲವಾರು ಸಚಿವರು ಹಾಗೂ  ಶಾಸಕರು ರಾಹುಲ್ ಗಾಂಧಿಯವರ ಜೊತೆಯಲ್ಲಿದ್ದಾರೆ.

Similar News