ಅಪ್ರಾಪ್ತೆಯ ಸಮ್ಮತಿ ʼಒಪ್ಪಿಗೆʼಯಾಗದು: ಅತ್ಯಾಚಾರ ಆರೋಪಿಗೆ ಜಾಮೀನು ನಿರಾಕರಿಸಿದ ದಿಲ್ಲಿ ಹೈಕೋರ್ಟ್

Update: 2022-12-06 09:08 GMT

ಹೊಸದಿಲ್ಲಿ: ಕಾನೂನಿನ ಕಣ್ಣಿನಲ್ಲಿ ಅಪ್ರಾಪ್ತ ಬಾಲಕಿಯ ಸಮ್ಮತಿ ಒಪ್ಪಿಗೆಯಾಗುವುದಿಲ್ಲ ಎಂದು ಹೇಳಿರುವ ದಿಲ್ಲಿ ಹೈಕೋರ್ಟ್ 16 ವರ್ಷದ ಬಾಲಕಿಯ ಅತ್ಯಾಚಾರ ನಡೆಸಿದ ಆರೋಪ ಹೊಂದಿರುವ ವ್ಯಕ್ತಿಗೆ ಜಾಮೀನು ನೀಡಲು ನಿರಾಕರಿಸಿದೆ. ಇದೇ ಸಂದರ್ಭದಲ್ಲಿ ಸಂತ್ರಸ್ತ ಬಾಲಕಿಯ ಜನ್ಮ ದಿನಾಂಕವನ್ನು ಆಧಾರ್ ಕಾರ್ಡ್ ನಲ್ಲಿ ಬದಲಾಯಿಸಿರುವುದನ್ನೂ ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು, “ಬಾಲಕಿಯ ಜನ್ಮ ದಿನಾಂಕವನ್ನು ಆಧಾರ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿರುವುದು ಗಂಭೀರ ಅಪರಾಧವಾಗಿದೆ” ಎಂದೂ ಅಭಿಪ್ರಾಯ ಪಟ್ಟಿದೆ.

“ಆಧಾರ್ ಕಾರ್ಡ್ ನಲ್ಲಿ ಸಂತ್ರಸ್ತ ಬಾಲಕಿಯ ಜನ್ಮ ದಿನಾಂಕವನ್ನು ತಿದ್ದುಪಡಿ ಮಾಡುವ ಮೂಲಕ ದುರ್ಲಾಭ ಪಡೆಯಲು ಯತ್ನಿಸಿರುವ ಆರೋಪಿಯು, ಬಾಲಕಿಯೊಂದಿಗೆ ದೈಹಿಕ ಸಂಪರ್ಕವೇರ್ಪಟ್ಟಾಗ ಆಕೆ ಅಪ್ರಾಪ್ತೆಯಾಗಿರಲಿಲ್ಲ ಎಂದು ನಿರೂಪಿಸಲು ಪ್ರಯತ್ನಿಸುತ್ತಿರುವಂತಿದೆ” ಎಂದಿರುವ ನ್ಯಾ. ಜಸ್ಮೀತ್ ಸಿಂಗ್, ಆರೋಪಿಯು ಈಗಾಗಲೇ ವಿವಾಹವಾಗಿದ್ದು, 23 ವರ್ಷದನಾಗಿದ್ದಾಗ 16 ವರ್ಷದ ಬಾಲಕಿಯೊಂದಿಗೆ ದೈಹಿಕ ಸಂಬಂಧ ಹೊಂದಿರುವುದರಿಂದ ಜಾಮೀನು ಪಡೆಯಲು ಅನರ್ಹನಾಗಿದ್ದಾನೆ. ಕಾನೂನಿನ ಕಣ್ಣಿನಲ್ಲಿ ಅಪ್ತಾಪ್ತ ಬಾಲಕಿಯ ಸಮ್ಮತಿ ಒಪ್ಪಿಗೆಯಾಗುವುದಿಲ್ಲ” ಎಂದು ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ತನ್ನ  ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ತಂದೆ ನೀಡಿದ್ದ ದೂರನ್ನು ಆಧರಿಸಿ ಪೊಲೀಸರು 2019ರಲ್ಲಿ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದರು. ತದನಂತರ ಆಕೆಯನ್ನು ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಪತ್ತೆ ಹಚ್ಚಿದ್ದ ಪೊಲೀಸರು, ಮರಳಿ ವಾಪಸ್ ಕರೆ ತಂದಿದ್ದರು.

ಯುವಕನೋರ್ವನೊಂದಿಗೆ ಪತ್ತೆಯಾಗಿದ್ದ ಆ ಬಾಲಕಿ, ಸದರಿ ಯುವಕನು ನನ್ನ ಗೆಳೆಯನಾಗಿದ್ದು, ಆತನೊಂದಿಗೆ ಒಂದೂವರೆ ತಿಂಗಳು ಕಳೆದಿದ್ದೆ. ಈ ಸಂದರ್ಭದಲ್ಲಿ ಆತ ನನ್ನ ಒಪ್ಪಿಗೆ ಪಡೆದು ನನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ. ನಾನು ಆತನೊಂದಿಗೇ ಇರಲು ಬಯಸುತ್ತೇನೆ ಎಂದು ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ನೀಡಿದ್ದಳು.

ಆರೋಪಿಯು ತಾನು 2019ರಿಂದ ಬಂಧನದಲ್ಲಿರುವುದರಿಂದ ಹಾಗೂ ನನ್ನ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿರುವ ಕಾರಣ ತನಗೆ ಜಾಮೀನು ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು.

Similar News