ಲಖೀಂಪುರ್‌ ಖೇರಿ ಪ್ರಕರಣ: ಆಶಿಷ್‌ ಮಿಶ್ರಾ, ಇತರ 13 ವಿರುದ್ಧ ಆರೋಪ ಪಟ್ಟಿ ಮಾಡಿದ ಜಿಲ್ಲಾ ನ್ಯಾಯಾಲಯ

Update: 2022-12-06 12:35 GMT

ಲಕ್ನೋ : ಲಖೀಂಪುರ್‌ ಖೇರಿಯ (Lakhimpur Kheri) ಟಿಕುನಿಯಾ ಎಂಬಲ್ಲಿ ಅಕ್ಟೋಬರ್‌ 2021 ರಲ್ಲಿ ಎಸ್‌ಯುವಿಯನ್ನು ಹರಿಸಿ ಐದು ಮಂದಿಯ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಷ್‌ ಮಿಶ್ರಾ (Ashish Mishra) ಮತ್ತು 13 ಮಂದಿ ಇತರರ ವಿರುದ್ಧ ಲಖೀಂಪುರ್‌ ಖೇರಿ ಜಿಲ್ಲಾ ನ್ಯಾಯಾಲಯ ಆರೋಪ ಪಟ್ಟಿ ಮಾಡಿದೆ.

ಮುಂದಿನ ವಿಚಾರಣಾ ದಿನಾಂಕವನ್ನು ನ್ಯಾಯಾಲಯ ಡಿಸೆಂಬರ್‌ 16ಕ್ಕೆ ನಿಗದಿಪಡಿಸಿದೆ. ಆಶಿಷ್‌ ಮಿಶ್ರಾ ಮತ್ತು ಇತರ  ಆರೋಪಿಗಳ ವಿರುದ್ಧ ಕೊಲೆ, ಕೊಲೆಯತ್ನ, ಗಲಭೆ ಆರೋಪ ಕುರಿತಂತೆ ಐಪಿಸಿ ಸೆಕ್ಷನ್‌ 148, 149, 302, 307, 326, 427, 120ಬಿ,  ಮೋಟಾರು ವಾಹನ ಕಾಯಿದೆಯ ಸೆಕ್ಷನ್‌ 177 ಮತ್ತು ಶಸ್ತ್ರಾಸ್ತ್ರ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಘಟನೆಯಲ್ಲಿ ಮೃತ ನಾಲ್ಕು ಮಂದಿ ರೈತರಾಗಿದ್ದರೆ ಇನ್ನೊಬ್ಬರು ಪತ್ರಕರ್ತರಾಗಿದ್ದರು.

ತನ್ನನ್ನು ಈ ಪ್ರಕರಣದಿಂದ ಮುಕ್ತಗೊಳಿಸಬೇಕೆಂದು ಕೋರಿ ಮಿಶ್ರಾ ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ಸೋಮವಾರ ವಜಾಗೊಳಿಸಿತ್ತು.

ಇದಕ್ಕೂ ಮುಂಚೆ ನವೆಂಬರ್‌ 11 ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಮತ್ತು ಬಿ ವಿ ನಾಗರತ್ನ ಅವರ ಪೀಠವು ಮಿಶ್ರಾ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸುವುದರಿಂದ ಹಿಂದೆ ಸರಿದಿತ್ತು.

Similar News