ನಾರಾಯಣ ಶೆಟ್ಟಿ, ಮಹಾಬಲ ಶೆಟ್ಟಿ ನೆನಪಿನಲ್ಲಿ ಯಕ್ಷಾಂಗಣ ಗೌರವ

Update: 2022-12-06 13:33 GMT

ಮಂಗಳೂರು: ’ಯಕ್ಷಗಾನ ತಾಳಮದ್ದಳೆಯಲ್ಲಿ ಕೃಷಿ ಮಾಡಿದ ಬಹುತೇಕ ಹಿರಿಯರು ಶಾಲಾ-ಕಾಲೇಜು ಕಲಿತು ವಿದ್ವಾಂಸರಾದವರಲ್ಲ. ಅವರು ಅನುಭವದಿಂದಲೇ ಅರ್ಥಧಾರಿಗಳಾದವರು. ಫರಂಗಿಪೇಟೆ ಪರಿಸರದಲ್ಲಿ ತಾಳಮದ್ದಳೆ ಕೂಟಗಳನ್ನು ಸಂಘಟಿಸಿ, ಕಿರಿಯರಿಗೆ ಎ.ಕೆ. ನಾರಾಯಣಶೆಟ್ಟಿ ಮಾರ್ಗದರ್ಶನ ನೀಡಿದರೆ ಎ.ಕೆ.ಮಹಾಬಲ ಶೆಟ್ಟರು ಅದನ್ನು ಮುಂದುವರಿಸಿದವರು ಎಂದು ರೋಟರಿ ಜಿಲ್ಲೆ 3181 ರಾಜ್ಯಪಾಲ ರೊ.ಎನ್. ಪ್ರಕಾಶ್ ಕಾರಂತ್ ಹೇಳಿದ್ದಾರೆ.

ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ‘ಯಕ್ಷಾಂಗಣ ಮಂಗಳೂರು’ ವತಿಯಿಂದ ಮಂಗಳೂರು ವಿ.ವಿ. ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದೊಂದಿಗೆ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಸಪ್ತ ವಿಜಯ: ಯಕ್ಷಗಾನ ತಾಳಮದ್ದಳೆ ಸಪ್ತಾಹ - 2022’ ಹತ್ತನೇ ವರ್ಷದ ನುಡಿ ಹಬ್ಬದ ಅಂಗವಾಗಿ ಜರಗಿದ ದಿ. ಎ.ಕೆ. ನಾರಾಯಣಶೆಟ್ಟಿ ಮತ್ತು ಎ.ಕೆ ಮಹಾಬಲ ಶೆಟ್ಟಿ ಸಂಸ್ಮರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ದಿ.ನಾರಾಯಣ ಶೆಟ್ಟಿಯ ಪತ್ನಿ ಕಾವೇರಿ ಎನ್.ಶೆಟ್ಟಿ ಸಂಸ್ಮರಣ ಜ್ಯೋತಿ ಬೆಳಗಿದರು. ಪರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ಕೆ.ಕೆ.ಪೂಂಜಾ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಎ.ಕೆ.ಜಯರಾಮ ಶೇಖ ಅಭಿನಂದನಾ ಭಾಷಣ ಮಾಡಿದರು. ಕವಿ, ಸಂಘಟಕ ಕೆ.ಲಕ್ಷ್ಮಿನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು.

ಕಲಾವಿದ ನಂದಳಿಕೆ ಸುಬ್ರಹ್ಮಣ್ಯ ಬೈಪಾಡಿತ್ತಾಯ ರಚಿಸಿದ ’ಸಾಧಿತ - ಸಾದರ’ ಕೃತಿಯನ್ನು ಮುಂಡಪಳ್ಳ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಅಹ್ಮದ್ ನಗರ ಬಿಡುಗಡೆಗೊಳಿಸಿದರು.

ಯಕ್ಷದ್ರುವ ಪಟ್ಲ ಪೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಮಂಗಳೂರು ವಿ.ವಿ. ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ  ಪ್ರೊ.ಶ್ರೀಪತಿ ಕಲ್ಲೂರಾಯ ಮತ್ತು ಪದ್ಮಾವತಿ ಜಯರಾಮ ಶೇಖ ಅತಿಥಿಗಳಾಗಿದ್ದರು.

ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು ಸಂಚಾಲಕ ಕೆ. ರವೀಂದ್ರ ರೈ ಕಲ್ಲಿಮಾರು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ವಂದಿಸಿದರು. ಉಪಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಮಿತಿ ಸದಸ್ಯರಾದ ಸಿದ್ದಾರ್ಥ ಅಜ್ರಿ, ಸುಜ್ಯೋತಿ ಶೇಖ ಮತ್ತಿತರರು ಉಪಸ್ಥಿತರಿದ್ದರು.

Similar News