ಪ್ರಧಾನಿ ವಿರುದ್ಧ ನಕಲಿ ದಾಖಲೆ ಬಳಸಿದ್ದಾರೆ: ಸಾಕೇತ್‌ ಗೋಖಲೆ ವಿರುದ್ಧ ಪೊಲೀಸ್‌ ಆರೋಪ

Update: 2022-12-06 14:42 GMT

ಹೊಸದಿಲ್ಲಿ: ಸೇತುವೆ ದುರಂತದ ಬಳಿಕ ಗುಜರಾತ್‌ನ ಮೊರ್ಬಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಕ್ಕೆ ಸಂಬಂಧಿಸಿದ ಸುಳ್ಳು ಆರೋಪಗಳನ್ನು ಮಾಡಲು ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ನಕಲಿ ದಾಖಲೆಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ಆರೋಪಿಸಿದೆ. ರಾಜಸ್ಥಾನದಲ್ಲಿ ಅವರನ್ನು ನಾಟಕೀಯವಾಗಿ ಬಂಧಿಸಿದ ಮರುದಿನ ಪೊಲೀಸ್‌ ಮೂಲಗಳು ಈ ಆರೋಪ ಮಾಡಿವೆ.

ತೃಣಮೂಲ ಪಕ್ಷದ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಅವರನ್ನು ನಿನ್ನೆ ತಡರಾತ್ರಿ ಜೈಪುರದಲ್ಲಿ ಪ್ರಧಾನಿ ಮೋದಿಯವರ ಮೇಲೆ "ನಕಲಿ ಸುದ್ದಿ" ಹರಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಅಹಮದಾಬಾದ್‌ನಲ್ಲಿ ಬಿಜೆಪಿ ನಾಯಕ ಅಮಿತ್ ಕೊಠಾರಿ ಪೊಲೀಸರಿಗೆ ದೂಡು ನೀಡಿದ ಬಳಿಕ ಗೋಖಲೆಯವರ ಬಂಧನವಾಗಿದೆ.

ಗೋಖಲೆ ಅವರು ಫೋರ್ಜರಿ ಮುಂತಾದ ಆರೋಪಗಳನ್ನು ಎದುರಿಸಬೇಕಾಗುತ್ತದೆ, ಇದು ಐದು ವರ್ಷಗಳ ಜೈಲು ಶಿಕ್ಷೆಗೆ ಕಾರಣವಾಗಬಹುದು ಎಂದು ವರದಿಗಳು ಹೇಳಿವೆ.

 “ಪ್ರಧಾನಿ ಅವರ ಮೋರ್ಬಿ ಭೇಟಿಯಿಂದ ಗುಜರಾತ್ ಸರ್ಕಾರಕ್ಕೆ ₹ 30 ಕೋಟಿ ವೆಚ್ಚವಾಗಿದೆ, ಇದು ಸಂತ್ರಸ್ತರಿಗೆ ನೀಡಿದ ಪರಿಹಾರಕ್ಕಿಂತ (ಒಟ್ಟು ₹ 5 ಕೋಟಿ) ಹೆಚ್ಚು” ಎಂದು ಸಾಕೇತ್‌ ಗೋಖಲೆ ಟ್ವೀಟ್‌ ಮಾಡಿದ್ದರು. ಅದೇ ದಿನ ಸರ್ಕಾರದ ಸತ್ಯ-ಪರಿಶೀಲನಾ ತಂಡವು ಇದನ್ನು "ನಕಲಿ" ಎಂದು ಹೇಳಿತ್ತು.

Similar News