ತಾರಕಕ್ಕೇರಿದ ಬೆಳಗಾವಿ ಗಡಿ ವಿವಾದ: ಕರ್ನಾಟಕಕ್ಕೆ ಬಸ್‌ ಸೇವೆ ಸ್ಥಗಿತಗೊಳಿಸಿದ MSRTC

Update: 2022-12-06 18:22 GMT

ಮುಂಬೈ: ಬೆಳಗಾವಿ ಗಡಿ ವಿವಾದ ತಾರಕಕ್ಕೇರುತ್ತಿದ್ದಂತೆ ಮಹಾರಾಷ್ಟ್ರ (Maharashtra) ಸಾರ್ವಜನಿಕ ಸಾರಿಗೆ ಸಂಸ್ಥೆಯು(MSRTC) ಮಹಾರಾಷ್ಟ್ರ ಮತ್ತು ಕರ್ನಾಟಕ (Karnataka) ನಡುವೆ ಬಸ್ ಸೇವೆಗಳನ್ನು ನಡೆಸುವುದಿಲ್ಲ ಎಂದು ಘೋಷಿಸಿದೆ. 

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ರಾಜ್ಯ ನಿಗಮದ ಬಸ್‌ಗಳು ಹೋಗುವುದಿಲ್ಲ ಎಂದು ಎಂಎಸ್‌ಆರ್‌ಟಿಸಿ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ. 

ಮಹಾರಾಷ್ಟ್ರದ-ಕರ್ನಾಟಕ ಗಡಿ ವಿವಾದ ಮತ್ತೆ ಭುಗಿಲೆದ್ದಿದ್ದು, ಹಲವು ಕನ್ನಡ ಪರ ಸಂಘಟನೆಗಳು ಬೆಳಗಾವಿಯಲ್ಲಿ ಬೀಡು ಬಿಟ್ಟಿದೆ. ಈ ನಡುವೆ, ಮಹಾರಾಷ್ಟ್ರದ ಹಲವು ವಾಹನಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿದೆ ಎಂದು ಆರೋಪಿಸಿ ಮಹಾರಾಷ್ಟ್ರದ ರಾಜಕೀಯ ನಾಯಕರು ಕೇಂದ್ರದ ಮಧ್ಯಪ್ರವೇಶವನ್ನು ಕೋರಲು ಪ್ರಾರಂಭಿಸಿದ್ದಾರೆ.

 ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, “ಕರ್ನಾಟಕ ಸಿಎಂ (ಬಸವರಾಜ್ ಬೊಮ್ಮಾಯಿ) ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದರೆ, ಕೇಂದ್ರ ಮಧ್ಯಪ್ರವೇಶಿಸಬೇಕು” ಎಂದು ಹೇಳಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ ನಾಳೆಯಿಂದ ಪ್ರಾರಂಭವಾಗುವುದರಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಬಳಿಗೆ ನಿಯೋಗ ಕೊಂಡೊಯ್ಯಲು ಮಹಾರಾಷ್ಟ್ರದ ಸಂಸದರಿಗೆ ಮನವಿ ಮಾಡುವುದಾಗಿ ಅವರು ಹೇಳಿದ್ದಾರೆ.

ಬಿಜೆಪಿ ರಾಜ್ಯಸಭಾ ಸಂಸದ ಉದಯರಾಜೇ ಭೋಸಲೆ ಮಾತನಾಡಿ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಮಹಾರಾಷ್ಟ್ರ ಮತ್ತು ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳ ನಾಯಕರನ್ನು ಕರೆಯಬೇಕು. ಬಹುಕಾಲದಿಂದ ಬಾಕಿ ಉಳಿದಿರುವ ಗಡಿ ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಚರ್ಚಿಸಬೇಕು ಎಂದು ಹೇಳಿದ್ದಾರೆ. 

ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿ ಬೆಳಗಾವಿಯ ಹಿರೇಬಾಗವಾಡಿಯಲ್ಲಿ ನಡೆದ ಘಟನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. 

ಈ ಘಟನೆಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ಭರವಸೆ ನೀಡಿದ್ದು ಮಹಾರಾಷ್ಟ್ರದಿಂದ ಬರುವ ವಾಹನಗಳಿಗೆ ರಕ್ಷಣೆ ನೀಡಲಾಗುವುದು ಎಂದು ದೇವೇಂದ್ರ ಫಡ್ನವಿಸ್ ಅವರೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ ಹೇಳಿರುವುದಾಗಿ ವರದಿಯಾಗಿದೆ.

Similar News