ವಿಧಾನಸಭೆ ಚುನಾವಣೆ: ಕಳೆದ ಹತ್ತು ವರ್ಷಗಳಲ್ಲೇ ಕಡಿಮೆ ಮತದಾನಕ್ಕೆ ಸಾಕ್ಷಿಯಾದ ಗುಜರಾತ್

Update: 2022-12-07 07:15 GMT

ಅಹಮದಾಬಾದ್: ಗುಜರಾತ್ (Gujarat) ವಿಧಾನಸಭೆಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟಾರೆ ಶೇ. 64.33ರಷ್ಟು ಮತದಾನವಾಗಿದ್ದು, ಕಳೆದ ಹತ್ತು ವರ್ಷಗಳಲ್ಲೇ ಕಡಿಮೆ ಮತದಾನ ದಾಖಲಾಗಿದೆ.

ಮಂಗಳವಾರ ಚುನಾವಣಾ ಆಯೋಗವು ಎರಡನೆ ಹಂತದ ಶೇಕಡಾವಾರು ಮತದಾನದ ವಿವರ ಬಿಡುಗಡೆ ಮಾಡಿದ್ದು, ಶೇ. 65.3ರಷ್ಟು ಮತದಾನವಾಗಿದೆ. ಮೊದಲ ಹಂತದ ಶೇ. 63.14 ಅನ್ನು ಒಟ್ಟುಗೂಡಿಸಿದಾಗ ರಾಜ್ಯದಲ್ಲಿ ಸರಾಸರಿ ಶೇ. 64.33 ಮತದಾನವಾಗಿದೆ. ಇದು ಕಳೆದ ಹತ್ತು ವರ್ಷಗಳಲ್ಲೇ ಗುಜರಾತ್‌ನಲ್ಲಿ ನಡೆದಿರುವ ಕನಿಷ್ಠ ಮತದಾನವಾಗಿದೆ.

ಗುಜರಾತ್ ರಾಜ್ಯ ಚುನಾವಣಾ ಆಯೋಗವು ಸೋಮವಾರ ಅಂತ್ಯಗೊಂಡ ಮತದಾನದ ಇಪ್ಪತ್ತ ನಾಲ್ಕು ಗಂಟೆಗಳ ತರುವಾಯ ರಾಜ್ಯದ ಒಟ್ಟಾರೆ ಶೇಕಡಾವಾರು ಪ್ರಮಾಣವನ್ನು ಪ್ರಕಟಿಸಿದೆ. ಈ ಅಂಕಿ-ಅಂಶದ ಪ್ರಕಾರ ಗುಜರಾತ್ ರಾಜ್ಯದ ಒಟ್ಟು 4.9 ಕೋಟಿ ಮತದಾರರ ಪೈಕಿ 3.16 ಕೋಟಿ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಈ ಪೈಕಿ ಶೇ. 66.74 ಮಂದಿ ಪುರುಷರು ಹಾಗೂ ಶೇ. 61.75 ಮಂದಿ ಮಹಿಳೆಯರು ತಮ್ಮ ಮತ ಚಲಾಯಿಸಿದ್ದಾರೆ.

ರಾಜ್ಯದಲ್ಲಿ ನಡೆದಿರುವ ಕಡಿಮೆ ಪ್ರಮಾಣದ ಮತದಾನದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ವಕ್ತಾರ ಮನೀಶ್ ದೋಶಿ, ಮತದಾನ ಪ್ರಮಾಣದ ಕುಸಿತವಾದಾಗಲೆಲ್ಲ ಬಿಜೆಪಿಯ ಗೆಲುವಿನ ಸ್ಥಾನಗಳೂ ಕುಸಿದಿವೆ ಎಂಬುದರತ್ತ ಬೊಟ್ಟು ಮಾಡಿದ್ದಾರೆ.

“2012ರಲ್ಲಿ ಶೇ. 70ಕ್ಕಿಂತ ಅಧಿಕ ಮತದಾನವಾಗಿದ್ದಾಗ ಬಿಜೆಪಿ 117 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಅದೇ 2017ರಲ್ಲಿ ಅವರ ಸ್ಥಾನ 99ಕ್ಕೆ ಕುಗ್ಗಿತ್ತು. ಈ ಚುನಾವಣೆಯಲ್ಲಿ ನಿಕಟ ಸ್ಪರ್ಧೆಯ ಕಾರಣಕ್ಕೆ ನಾವು ಕೆಲವು ಸ್ಥಾನಗಳನ್ನು ಕಳೆದುಕೊಳ್ಳಲಿದ್ದೇವೆ. ವಾಸ್ತವವಾಗಿ ನಾವು ಚುನಾವಣೆಗೂ ಮುನ್ನ 125 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಯೋಜನೆ ಹೊಂದಿದ್ದೆವು. ಆದರೆ, ಚುನಾವಣಾ ಫಲಿತಾಂಶದಲ್ಲಿ 110 ಸ್ಥಾನಗಳನ್ನಾದರೂ ತಲುಪುವ ಮೂಲಕ ಮತಗಟ್ಟೆ ಸಮೀಕ್ಷೆಗಳನ್ನು ಹುಸಿಗೊಳಿಸಲಿದ್ದೇವೆ” ಎಂದು ಅವರು ಹೇಳುತ್ತಾರೆ.

ಆದರೆ, ಬಿಜೆಪಿ ದಾಖಲೆ ಸಂಖ್ಯೆಯ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಬಿಜೆಪಿ ವಕ್ತಾರ ಯಮಲ್ ವ್ಯಾಸ್, “ಮದುವೆಯ ಋತು ಆಗಿರುವುದರಿಂದ ಮತದಾನದ ಪ್ರಮಾಣ ಕಡಿಮೆಯಾಗಿದೆ. ಆದರೆ, ಬಿಜೆಪಿ ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸಿರುವುದರಿಂದ ಬಿಜೆಪಿ ದಾಖಲೆ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ” ಎಂದು ಹೇಳಿದ್ದಾರೆ.

ಬನಸ್ಕಾಂತ ಜಿಲ್ಲೆಯ ತರಾಡ್‌ನಲ್ಲಿ ಅತಿ ಹೆಚ್ಚು ಶೇ. 86.91ರಷ್ಟು ಮತದಾನವಾಗಿದ್ದು, 2017ರ ಚುನಾವಣೆಯಲ್ಲಿನ ಶೇ. 86.15 ಮತದಾನಕ್ಕೆ ಹೋಲಿಸಿದರೆ ತುಸು ಹೆಚ್ಚಾಗಿದೆ. ದಾಹೋದ್ ಜಿಲ್ಲೆಯ ಗರ್ಬಡಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ. 50.15ರಷ್ಟು ಮತದಾನವಾಗಿದೆ.

Similar News