"ಮೀಸಲಾತಿ ಮೂಲಕ ನೌಕರಿ ಪಡೆದಿದ್ದೀರಾ?": ಕೋರ್ಟಿನಲ್ಲಿ ಅಧಿಕಾರಿಯನ್ನು ಪ್ರಶ್ನಿಸಿದ ನ್ಯಾಯಾಧೀಶ

Update: 2022-12-07 10:31 GMT

ಪಾಟ್ನಾ: ಉತ್ತರ ಪ್ರದೇಶದ ಬುಲ್‌ ಡೋಜರ್‌ ಕ್ರಮದಿಂದ ಪ್ರೇರಿತರಾಗಿ ಮಹಿಳೆಯೊಬ್ಬಳ ಮನೆಯನ್ನು ನೆಲಸಮಗೊಳಿಸಿದ್ದ ಬಿಹಾರ ಪೊಲೀಸರನ್ನು ಇತ್ತೀಚೆಗೆ  ಪಾಟ್ನಾ ಹೈಕೋರ್ಟಿನ ನ್ಯಾಯಾಧೀಶ ಸಂದೀಪ್‌ ಕುಮಾರ್‌ ತರಾಟೆಗೆ ತೆಗೆದುಕೊಂಡಿದ್ದ ವೀಡಿಯೋ ಬಹಳಷ್ಟು ಸುದ್ದಿಯಾಗಿದ್ದರೆ ಇದೀಗ ಅದೇ ನ್ಯಾಯಾಧೀಶರು ನೀಡಿದ ಇನ್ನೊಂದು ಹೇಳಿಕೆಯ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನವೆಂಬರ್‌ 23 ರ ಕೋರ್ಟ್‌ ಕಲಾಪದ ವೀಡಿಯೋದ ಒಂದು ತುಣುಕು ಸಾಕಷ್ಟು ವೈರಲ್‌ ಆಗಿದೆ.

ಅದರಲ್ಲಿ ನ್ಯಾಯಾಧೀಶ ಸಂದೀಪ್‌ ಕುಮಾರ್‌ ಅವರು ಸರಕಾರಿ ಅಧಿಕಾರಿಯೊಬ್ಬರನ್ನುದ್ದೇಶಿಸಿ ಮೀಸಲಾತಿ ಮೂಲಕ ನೌಕರಿ ಪಡೆದಿದ್ದೀರಾ ಎಂದು ಕೇಳಿದ್ದು ಹಾಗೂ ಇದನ್ನು ಕೇಳಿ ಇತರ ವಕೀಲರು ಹಾಗೂ ನ್ಯಾಯಾಲಯದಲ್ಲಿದ್ದ ಇತರರು ನಕ್ಕಿದ್ದು ಕೇಳಿಸುತ್ತದೆ.

ಜಮೀನೊಂದರ ಕುರಿತಾದ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಅದಕ್ಕೆ ಪರಿಹಾರ ಏಕೆ ಬಿಡುಗಡೆಗೊಳಿಸಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಲು ನ್ಯಾಯಾಲಯಕ್ಕೆ ಹಾಜರಾಗುವಂತೆ ಜಿಲ್ಲಾ ಭೂ ಸ್ವಾಧೀನ ಅಧಿಕಾರಿಯಾಗಿರುವ ಅರವಿಂದ್‌ ಕುಮಾರ್‌ ಭಾರತಿ ಎಂಬವರಿಗೆ ಸೂಚಿಸಲಾಗಿತ್ತು. ವಿಚಾರಣೆ ನಂತರ ಅಫಿಡವಿಟ್‌ ಸಲ್ಲಿಕೆಗೆ ಕಾಲಾವಕಾಶ ನೀಡಿ  ವಿಚಾರಣೆ ಮುಂದೂಡಲಾಗಿತ್ತು. ಆಗ ಜಸ್ಟಿಸ್‌ ಕುಮಾರ್ ಅವರು ಹಿಂದಿಯಲ್ಲಿ ಭಾರತೀಜಿ ನೀವು ಮೀಸಲಾತಿ ಮೂಲಕ ನೌಕರಿ ಗಿಟ್ಟಿಸಿದ್ದೀರಾ?ʼʼ ಎಂದು ಹೇಳುತ್ತಿರುವುದು ಕೇಳಿಸುತ್ತದೆ.

ಕೋರ್ಟಿನಿಂದ ಹೊರನಡೆಯುತ್ತಿದ್ದ ಅಧಿಕಾರಿ ಅದಕ್ಕೆ ಸಕಾರಾತ್ಮಕ ಉತ್ತರ ನೀಡಿದಾಗ ನ್ಯಾಯಾಧೀಶರು ʻʻಹೆಸರಿನಿಂದಲೇ ತಿಳಿಯಿತು," ಎಂದು ಹೇಳಿದರು.

ಭಾರತಿ ಹೊರನಡೆದಾಗ ಕೆಲ ವಕೀಲರು ನಗುತ್ತಾ ʻʻಈಗ  ಅವರಿಗೆ ವಿಷಯ ಅರ್ಥವಾಗುತ್ತದೆ,ʼʼ ಎಂದು ಹೇಳುವುದು ಕೇಳಿಸುತ್ತದೆ. ಆಗ ಇನ್ನೊಬ್ಬರು  "ಎರಡು ಹುದ್ದೆಯಲ್ಲಿ ಸಿಗುವಷ್ಟು ಅವರು ಗಳಿಸಿರಬೇಕು," ಎಂದು ಹೇಳುತ್ತಾರೆ.

ಆಗ ನ್ಯಾಯಾಧೀಶರು, ʻʻಇಲ್ಲ, ಇಲ್ಲ, ಈ ಜನರಿಗೆ ಏನೂ ಆಗುವುದಿಲ್ಲ, ಆ ಬಡಪಾಯಿ ಗಳಿಸಿದ್ದೆಲ್ಲವನ್ನೂ ಖಾಲಿ ಮಾಡಿರಬೇಕು," ಎಂದರು.

ಈ ಸಂವಾದ ಕುರಿತಂತೆ ಅಧಿಕಾರಿ ಬಳಿ ನಂತರ ಮಾಧ್ಯಮದವರೊಬ್ಬರು ಪ್ರಶ್ನಿಸಿದಾಗ ಅವರು ತಮಾಷೆಗೆ ಹೇಳಿದ್ದಾರೆ ಎಂದರು.

Similar News