ನೋಟು ಅಮಾನ್ಯೀಕರಣ ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸುವಂತೆ ಕೇಂದ್ರ, ಆರ್‌ಬಿಐ ಗೆ ಸೂಚಿಸಿದ ಸುಪ್ರೀಂ ಕೋರ್ಟ್‌

Update: 2022-12-07 12:46 GMT

ಹೊಸದಿಲ್ಲಿ : ಕೇಂದ್ರ ಸರ್ಕಾರ 2016 ರಲ್ಲಿ ಜಾರಿಗೆ ತಂದ ಅಮಾನ್ಯೀಕರಣ (demonetisation) ನೀತಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸುವಂತೆ ಕೇಂದ್ರ ಮತ್ತು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ(RBI) ಇಂದು ಸುಪ್ರೀಂ ಕೋರ್ಟ್‌ (Supreme Court) ಆದೇಶಿಸಿದೆ.

ಈ ದಾಖಲೆಗಳನ್ನು ಸೀಲ್‌ ಮಾಡಲ್ಪಟ್ಟ ಲಕೋಟೆಯಲ್ಲಿ ಸಲ್ಲಿಸಲಾಗುವುದು ಎಂದು ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ತಿಳಿಸಿದ್ದಾರೆ.

ರೂ. 500 ಹಾಗೂ ರೂ 1000 ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿದ ಸರ್ಕಾರದ 2016 ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 58 ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌ ಅಬ್ದುಲ್‌ ನಜೀರ್‌, ಬಿ ಆರ್‌ ಗವಾಯಿ, ಎ ಎಸ್‌ ಬೋಪಣ್ಣ, ವಿ ರಾಮಸುಬ್ರಮಣಿಯನ್‌ ಮತ್ತು ಬಿ ವಿ ನಾಗರತ್ನ ಅವರನ್ನೊಳಗೊಂಡ ವಿಭಾಗೀಯ ಪೀಠ ಮೇಲಿನ ಸೂಚನೆ ನೀಡಿ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಡಿಸೆಂಬರ್‌ 10 ರೊಳಗೆ ಲಿಖಿತ ಹೇಳಿಕೆಗಳನ್ನು ಸಲ್ಲಿಸಲು ಸಂಬಂಧಿತರಿಗೆ ನ್ಯಾಯಾಲಯ ಅನುಮತಿಸಿದೆ.

ಕೇಂದ್ರದ ನರೇಂದ್ರ ಮೋದಿ ಸರ್ಕಾರ ನವೆಂಬರ್‌ 8, 2016 ರಂದು ಜಾರಿಗೊಳಿಸಿದ ಅಮಾನ್ಯೀಕರಣ ನೀತಿಯು  ನಾಗರಿಕರ ಹಲವಾರು ಸಂವಿಧಾನಿಕ ಹಕ್ಕುಗಳನ್ನು -ಆಸ್ತಿಯ ಮೇಲಿನ ಹಕ್ಕು (ವಿಧಿ 300ಎ), ಸಮಾನತೆಯ ಹಕ್ಕು (ವಿಧಿ 14), ಯಾವುದೇ ವ್ಯಾಪಾರ ಅಥವಾ ವೃತ್ತಿ ನಡೆಸುವ ಹಕ್ಕು (ವಿಧಿ 19), ಜೀವಿಸುವ ಮತ್ತು ಜೀವನೋಪಾಯದ ಹಕ್ಕು (ವಿಧಿ 21) ಇವುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.

ಇದು ಆರ್ಥಿಕ ನೀತಿ ಸಂಬಂಧಿತ ನಿರ್ಧಾರವೆಂಬ ಕಾರಣಕ್ಕೆ ತಾನು ಮೌನ ಪ್ರೇಕ್ಷಕನ ಪಾತ್ರ ವಹಿಸುವುದಿಲ್ಲ ಎಂದು ವಿಚಾರಣೆಗಳ ವೇಳೆ ಸುಪ್ರೀಂ ಕೋರ್ಟ್‌ ಹೇಳಿತ್ತು.

ಅಮಾನ್ಯೀಕರಣ ನೀತಿಯನ್ನು ಸಮರ್ಥಿಸಿದ್ದ ಕೇಂದ್ರ ಸರ್ಕಾರ, ಇದು ಬಹಳ ಯೋಚಿಸಿ ಕೈಗೊಂಡ ನಿರ್ಧಾರ ಹಾಗೂ ಆರ್‌ಬಿಐ ಜೊತೆ ಚರ್ಚಿಸಿ ಹಾಗೂ ಸಾಕಷ್ಟು ಪೂರ್ವತಯಾರಿ ನಡೆಸಿ ಕೈಗೊಳ್ಳಲಾದ ನಿರ್ಧಾರ ಎಂದು ಹೇಳಿತ್ತು.

ಇದನ್ನೂ ಓದಿ: ಜೂಜಾಟದ ಜಾಹೀರಾತುಗಳನ್ನು ಪ್ರದರ್ಶಿಸದಂತೆ ಗೂಗಲ್ ಗೆ ಸೂಚಿಸಿದ ಕೇಂದ್ರ: ವರದಿ

Similar News