ಡಿ.16ರಿಂದ ಉಡುಪಿ ಜಿಲ್ಲಾ ಮಟ್ಟದ ವಿದ್ಯಾಂಗರ ಸಮಾವೇಶ, ಪ್ರತಿಭಾ ಪ್ರದರ್ಶನ

Update: 2022-12-07 16:08 GMT

ಉಡುಪಿ, ಡಿ.7: ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲೆ, ಜಿಲ್ಲಾ ಮಟ್ಟದ ಸಮಗ್ರ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಒಕ್ಕೂಟ ಉಡುಪಿ ಜಿಲ್ಲೆ ಹಾಗೂ ಕೊಡವೂರು ವಿದ್ಯಾಂಗರ ರಕ್ಷಣಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ವಸತಿ ಸಹಿತ ‘ ಜಿಲ್ಲಾ ಮಟ್ಟದ ದಿವ್ಯಾಂಗರ ಸಮಾವೇಶ, ಪ್ರತಿಭಾ ಪ್ರದರ್ಶನ ಹಾಗೂ ದಿವ್ಯಾಂರ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ’ ಡಿ.16 ಮತ್ತು 17ರಂದು  ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಮಂಜುನಾಥ ಹೆಬ್ಬಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ 21 ಬಗೆಯ ಅಂಗವಿಕಲತೆಯ  ಒಟ್ಟು 12,000 ಅಂಗವಿಕಲರನ್ನು ಗುರುತಿಸಲಾಗಿದ್ದು, ಇವರನ್ನು ಮುಖ್ಯವಾಹಿನಿಗೆ ತರುವ ಪ್ರಕ್ರಿಯೆ ಅಂಗವಾಗಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು. 

ಅಂಗವಿಕಲರಿಗೆ ಸರಕಾರದ ವಿವಿಧ ಯೋಜನೆಗಳ ಅರಿವು ಕಾರ್ಯಕ್ರಮ, ಅವರಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಹಾಗೂ ದಿವ್ಯಾಂಗರಿಂದ ತಯಾರಾದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವೇದಿಕೆ ಯನ್ನು ಇಲ್ಲಿ ಒದಗಿಸಲಾಗುವುದು. ಜಿಲ್ಲೆಯ ಅಂಗವಿಕಲರ ಸಾಧನೆ, ಸಮಸ್ಯೆಗಳು, ಸವಾಲುಗಳ ಕುರಿತು ಚರ್ಚೆ ಹಾಗೂ ಅವುಗಳ ಬಗ್ಗೆ ಸರಕಾರದ ಗಮನ ಸೆಳೆಯುವ ಪ್ರಯತ್ನವೂ ನಡೆಯಲಿದೆ ಎಂದು ಹೆಬ್ಬಾರ್ ತಿಳಿಸಿದರು.

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ ನಿವೃತ್ತ ಉಪನಿರ್ದೇಶಕ ನಿರಂಜನ್ ಭಟ್ ಅವರು ಮಾತನಾಡಿ, ಸಭೆಯಲ್ಲಿ ಅಂಗವಿಕಲರಿಗೆ ಸರಕಾರದಿಂದ ದೊರೆಯುವ ವಿವಿಧ ಯೋಜನೆಗಳ ಮಾಹಿತಿಗಳನ್ನು ನೀಡಲಾಗುವುದು. ಸರಕಾರಿ ಸೌಲಭ್ಯ ಪಡೆಯುವ ಕುರಿತು ಸಹ ಅವರಿಗೆ ಸಹಾಯ ಮಾಡಲಾಗುವುದು ಎಂದರು.
ಅಂಗವಿಕಲರ ಸಾಮಾಜಿಕ ಪುನರ್ವಸತಿ ದೊಡ್ಡ ಸವಾಲಾಗಿದ್ದು, ಇದಕ್ಕಾಗಿ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಅಲ್ಲದೇ ಅಂಗವಿಕಲತೆಯ ಬಗ್ಗೆ ಅರಿವು ಮೂಡಿಸುವ ಯಕ್ಷಗಾನ ಪ್ರದರ್ಶನ ‘ವಿಜಯ ಚೇತನ’ದ ಪ್ರದರ್ಶನವೂ ಇಲ್ಲಿ ನಡೆಯಲಿದೆ. ಸಾಧಕರಿಗೆ ಸನ್ಮಾನವೂ ನಡೆಯಲಿದೆ ಎಂದು ಕೊಡವೂರು ದಿವ್ಯಾಂಗರ ರಕ್ಷಣಾ ಸಮಿತಿಯ ಅಧ್ಯಕ್ಷ ವಿಜಯ ಕೊಡವೂರು ತಿಳಿಸಿದರು.

ಅಂಗವಿಕಲ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸಂಪನ್ಮೂಲ ವ್ಯಕ್ತಿಗಳಿಂದ  ಕಾನೂನು ಅರಿವು, ಅಂಗವಿಕಲರ ಹಕ್ಕುಗಳ ಅಧಿನಿಯಮ 2016, ಉದ್ಯೋಗಾವಕಾಶಗಳ ಮಾಹಿತಿ, ಅಂಗವಿಕಲತೆ ಹಾಗೂ ಆರೈಕೆ ಬಗ್ಗೆ ಅರಿವು ಕಾರ್ಯಕ್ರಮವನ್ನೂ ಎರಡು ದಿನಗಳ ಸಮಾವೇಶದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಾಮಾಜಿಕ ಕಾರ್ಯಕರ್ತೆ ರೂಪಲಕ್ಷ್ಮೀ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತ ರಿದ್ದರು.

Similar News